ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಧರ್ಮಸ್ಥಳ ನಮ್ಮೆಲ್ಲರ ಪುಣ್ಯಕ್ಷೇತ್ರ, ಯಾರೋ ಷಡ್ಯಂತ್ರ ಮಾಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಧರ್ಮ ಒಡೆಯುವ ಕೆಲಸ ಮಾಡುತ್ತಿರುವುದು ಖಂಡನೀಯ. ಮೊದಲು ದೇಶ ಉಳಿಸೋಣ ನಂತರ ಧರ್ಮವನ್ನು ಕಾಪಾಡೋಣ ಎಂದು ಜೈನ ಮುನಿ ಆಚಾರ್ಯ ಶ್ರೀ ಕುಲರತ್ನಭೂಷಣ ಮುನಿಮಹಾರಾಜರು ಹೇಳಿದರು.ಧರ್ಮಸ್ಥಳ ಭಕ್ತರ ಅಭಿಮಾನಿ ವೇದಿಕೆ ತೇರದಾಳ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಸಮಸ್ತ ೩೪ ಸಮಾಜಗಳ ಜನತೆ ಮಠಾಧೀಶರ ನೇತೃತ್ವದಲ್ಲಿ ಗುರುವಾರ ರಬಕವಿ ಹೊಸ ಬಸ್‌ನಿಲ್ದಾಣದಿಂದ ಆರಂಭಗೊಂಡು ರಬಕವಿ-ರಾಮಪುರ ಮುಖ್ಯ ರಸ್ತೆಯುದ್ದಕ್ಕೂ ಪ್ರತಿಭಟನಾ ಪಾದಯಾತ್ರೆ ನಡೆಸಿ, ತಹಸೀಲ್ದಾರ ಕಚೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ೧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದುಗಳಿಗಾಗಿರುವ ಏಕೈಕ ದೇಶ ಭಾರತವಾಗಿದ್ದು, ಅಲ್ಲಿ ಅನೇಕ ಧರ್ಮಗಳಿವೆ. ಪವಿತ್ರ ಹಿಂದೂ ಧರ್ಮ ಒಡೆಯುವ ಹುನ್ನಾರ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಧರ್ಮಸ್ಥಳ ಜೈನ ಸಮುದಾಯಕ್ಕಷ್ಟೇ ಸೀಮಿತವಾಗಿಲ್ಲ, ಸಮಸ್ತ ಹಿಂಧೂ ಧರ್ಮದ ಪುಣ್ಯ ಕ್ಷೇತ್ರವಾಗಿದೆ. ಎಸ್‌ಐಟಿ ತನಿಖೆ ಅವಶ್ಯವಿತ್ತೆ ? ಸರ್ಕಾರ ಯಾವುದೇ ಆಗಿರಲಿ ಧರ್ಮ ಒಡೆಯಲು ನಾವು ಬಿಡುವುದಿಲ್ಲ, ನಾವು ಜೈನ ಮುನಿಗಳು ಬೀದಿಗಳಿದು ಹೋರಾಟ ಮಾಡಬಾರದೆಂದು ಎಲ್ಲಿಯೂ ಉಲ್ಲೇಖವಿಲ್ಲ. ದೇಶಕ್ಕೆ ಧಕ್ಕೆಯಾಗುವುದಾರೆ ಖಡ್ಗ ಹಿಡಿಯಲು ಧರ್ಮ ಹೇಳಿದೆ ಎಂದು ಖಾರವಾಗಿ ಮುನಿಗಳು ಸರ್ಕಾರದ ಹಾಗೂ ಆರೋಪಿತರ ವಿರುದ್ಧ ಗುಡುಗಿದ ಅವರು ಅನಾಮಿಕನೊಬ್ಬ ವಿಧಾನಸಭೆ ಆವರಣದಲ್ಲಿ ಶವಗಳನ್ನು ಹೂಳಲಾಗಿದೆ ಎಂದರೆ ವಿಧಾನಸೌಧ ಅಗೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇಶ ಉಳಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ, ದೇಶದ ಸಾರ್ವಭೌಮತೆಗೆ ಧಕ್ಕೆಯಾಗದಂತೆ ನಾವೆಲ್ಲರೂ ಸಂಘಟಿತರಾಗಿ ಧರ್ಮದಿಂದ ಹೋರಾಟ ಮಾಡಬೇಕು. ನಾವೆಲ್ಲರೂ ಭಾರತೀಯರು ನಮ್ಮದು ಅಂಹಿಸೆಯ ಧರ್ಮವಾದ್ದರಿಂದ ಪ್ರಜೆಗಳನ್ನು ಆಳುತ್ತಿರುವವರು ಜಾಗ್ರತೆಯಿಂದ ಪ್ರಜಾಸೇವೆ ಮಾಡಬೇಕೆಂದು ಸಲಹೆ ನೀಡಿದರು.ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ, ಹೇಡಿಗಳು ಧರ್ಮ-ಧರ್ಮಗಳ ನಡುವೆ ಬಿನ್ನಾಭಿಪ್ರಾಯ ಹುಟ್ಟುಹಾಕಿ ಪುಣ್ಯಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸಲು ಷಡ್ಯಂತ್ರ ಮಾಡಿದವರು ಕೆಲ ದಿನಗಳಲ್ಲಿ ಸರ್ವನಾಶವಾಗುತ್ತಾರೆ. ನಮ್ಮ ದೇಹದಲ್ಲಿ ಧರ್ಮಸ್ಥಳದ ಅನ್ನದ ಋಣವಿದೆ. ಅಲ್ಲಿಯ ಪ್ರಸಾದ ಸೇವಿಸಿದ್ದೇವೆ. ಮಂಜುನಾಥನ ಮಹಿಮೆ ಗೊತ್ತಿದ್ದೂ ಜೇನುಗೂಡಿಗೆ ಕೈ ಹಾಕಿದವರ ಬಾಳು ಗೋಳಾಗುವುದರಲ್ಲಿ ಸಂಶಯವಿಲ್ಲ. ರಾಜ್ಯದ ಅನೇಕ ಬಡಜನರಿಗೆ ಮಹಿಳೆಯರ ಸ್ವಾವಲಂಬನೆಗೆ ಧನಸಹಾಯ ಮಾಡುತ್ತಾ ಪುಣ್ಯದ ಕೆಲಸ ಮಾಡುವ ಧರ್ಮಾಧಿಕಾರಿಗಳಿಗೆ ಮಸಿ ಬಳಿಯುವವರಿಗೆ ಮಂಜುನಾಥ ತಕ್ಕ ಪಾಠ ಕಲಿಸುತ್ತಾನೆ. ಅವಮಾನಿಸುವ ಮುಸುಕುಧಾರಿಗಳು ದೇಶದ ಮೂಲೆ ಮೂಲೆಯಲ್ಲಿದ್ದಾರೆ. ಹಿಂದೂ ಹಾಗೂ ಜೈನ ಸಮುದಾಯವರ ಅವಮಾನಿಸುವ ಕೀಚಕ ಅನಾಮಿಕನ ಹೇಳಿಕೆ ಪ್ರಕಾರ ಆಸೆ ಆಮೀಷವೊಡ್ಡಿ ಇಂತಹ ಹೇಯಕೃತ್ಯಕ್ಕೆ ಬೆಂಬಲಿಸುವ ಮತ್ತು ಎಸ್‌ಐಟಿ ನೇಮಿಸಿದವರು ಸಾರ್ವಜನಿಕರ, ಭಕ್ತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಜುಂಜರವಾಡ ಗ್ರಾಮದ ಬಸವರಾಜೇಂದ್ರ ಶರಣರು, ರಬಕವಿ ಶ್ರೀ ಗುರುದೇವಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಹತ್ತು ಹಲವು ಜನಾಂಗಗಳಿಗೆ ಸಹಾಯ ಹಸ್ತ ನೀಡುವ ಕ್ಷೇತ್ರದ ಧರ್ಮದ ಕೆಲಸಕ್ಕೆ ಅಡ್ಡಿಪಡಿಸಿದ್ದು ಹೇಯ ಕಾರ್ಯ. ಅವಹೇಳನಕಾರಿ ಸುದ್ದಿ ಬಿಂಬಿಸುವ ಯ್ಯೂಟೂಬರ್‌ಗಳು ಧರ್ಮಾಧಿಕಾರಿಗಳ ಹೆಸರಿಗೆ ಚ್ಯುತಿಬರುವಂತೆ ಮಾಡುವುದು ಸರಿಯಲ್ಲ. ಯೂಟ್ಯೂಬರ್ ಸಮೀರ್, ಗಿರೀಶ ಮಟ್ಟಣ್ಣವರ, ತಿಮ್ಮಾರೆಡ್ಡಿ, ಮುಸುಕುಧಾರಿಗೆ ಶಿಕ್ಷೆಯಾಗಲೇಬೇಕು. ರಾಜ್ಯದಲ್ಲಿ ಜನ ದೊಂಬಿ ಎದ್ದಿದ್ದಾರೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಗ್ರಹಿಸಿದರು.ನಂತರ ತಹಸೀಲ್ದಾರ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತೇರದಾಳ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಸರ್ವಧರ್ಮಿಯರು ಭಾಗವಹಿಸಿದ್ದರು. ಪ್ರಮುಖರಾದ ಜೈನ ಧರ್ಮಿಯ ದರ್ಶನ ಭೂಷಣ ಮಹಾರಾಜ, ಸಲ್ಲೇಖನ ವೃತದಲ್ಲಿದ್ದರೂ ಧರ್ಮದ ಉಳಿವಿಗೆ ಪಾಲ್ಗೊಂಡ ಜ್ಞಾನಭೂಷಣಮತಿ, ಶಾಂತಿ ಧರ್ಮಭೂಷಣರು, ಸತೀಶ ಹಜಾರೆ, ಡಾ.ಮಹಾವೀರ ದಾನಿಗೊಂಡ, ಅಲ್ಲಮ ಪ್ರಭುದೇವರು, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ಸಂಜಯ ತೆಗ್ಗಿ, ಶಿವಾನಂದ ಗಾಯಕವಾಡ, ಸಂಜು ತೇಲಿ, ಆನಂದ ಜುಗಳಿ, ರವಿ ಗಡಾದ, ಡಾ.ಪುಷ್ಪದಂತ ದಾನಿಗೊಂಡ, ಸವಿತಾ ಹೊಸೂರ, ಗಂಗಪ್ಪ ಅಮ್ಮಲಜರಿ, ಶ್ರೀಶೈಲ ಬೀಳಗಿ, ವೈಷ್ಣವಿ ಬಾಗೇವಾಡಿ, ಮಹಾದೇವ ದುಪದಾಳ, ಮಹಾದೇವ ಕೋಟ್ಯಾಳ, ಸಿದ್ದನಗೌಡ ಪಾಟೀಲ, ಡಾ.ವಿನೋದ ಮೇತ್ರಿ, ಡಾ.ಅಭಿನಂದನ ಡೋರ್ಲೆ, ಗೌರಿ ಮಿಳ್ಳಿ, ಅಶೋಕ ಅಳಗೊಂಡ, ಮಹಾವೀರ ಕೊಕಟನೂರ ಸೇರಿದಂತೆ ಅನೇಕ ಶ್ರಾವಕ ಶ್ರಾವಕಿಯರು, ಮಹಿಳಾ ಮಂಡಳದ ಮುಖಂಡರು, ಮಹಿಳೆಯರು, ಅನೇಕ ಯುವಕರು ಸೇರಿದಂತೆ ಸರ್ವಧರ್ಮಿಯರು ಭಾಗವಹಿಸಿದ್ದರು.