ಪ್ರಪಂಚದಲ್ಲಿ ಭಾರತ ದೇಶ ಅತಿ ಹೆಚ್ಚು ವಿದ್ಯಾವಂತ, ಬುದ್ದಿವಂತ, ಶಕ್ತಿವಂತ ಯುವಕರನ್ನು ಹೊಂದಿರುವ ದೇಶವಾಗಿದ್ದು ಭಾರತವನ್ನು ವಿಶ್ವದ ನಂಬರ್ ಒನ್ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಯುವಕರಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಪ್ರಪಂಚದಲ್ಲಿ ಭಾರತ ದೇಶ ಅತಿ ಹೆಚ್ಚು ವಿದ್ಯಾವಂತ, ಬುದ್ದಿವಂತ, ಶಕ್ತಿವಂತ ಯುವಕರನ್ನು ಹೊಂದಿರುವ ದೇಶವಾಗಿದ್ದು ಭಾರತವನ್ನು ವಿಶ್ವದ ನಂಬರ್ ಒನ್ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಯುವಕರಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ನಗರದ ಎಸ್‌ವಿಪಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವಕ್ಕೆ ಯುವಕರೇ ಜೀವಾಳ. ಯುವಕರು ಈ ಸ್ಫರ್ಧಾತ್ಮಕ ಯುಗದಲ್ಲಿ ಬುದ್ದಿವಂತರಾಗಿಹೆಚ್ಚು ತಾಂತ್ರಿಕತೆಯಿಂದ ಭವಿಷ್ಯ ಕಟ್ಟಿಕೊಳ್ಳಲು ಆಲೋಚನೆ ಮಾಡಬೇಕು. ಯಾವುದೇ ಕೆಲಸವನ್ನು ಹಠ-ಛಲದಿಂದ ಮಾಡಬೇಕು. ನಮ್ಮ ಯುವಕರು ನೂರಾರು ಯುವಕರಿಗೆ ಉಧ್ಯೋಗ ನೀಡುವಂತಹ ನಿಟ್ಟಿನಲ್ಲಿ ಯೋಚಿಸಿ ಆಧುನಿಕ ಕೃಷಿಯಿಂದ ತಂತ್ರಜ್ಞಾನದ ವರೆಗೂ ವ್ಯವಹಾರ, ಕಂಪನಿಗಳ ಕಟ್ಟಿ ಕೆಲಸ ನೀಡುವಂತೆ ಬೆಳೆಯಬೇಕು ಎಂದು ಯುವಕರಲ್ಲಿ ಸ್ಪೂರ್ತಿ ತುಂಬಿದರು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ ತಾಲೂಕಿನಲ್ಲಿ ತಾವು ಮೊದಲಿನಿಂದಲೂ ಮೂಲಭೂತ ಸೌಲಭ್ಯಗಳು ಹಾಗೂ ಜನಪರ, ಅಭಿವೃದ್ದಿಪರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಯುವಕರಿಗೆ ಸರಕಾರ ನೀಡಬೇಕಿರುವ ಉದ್ಯೋಗಗಳನ್ನು ನಾನು ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ನೆರವಾಗುತ್ತಿದ್ದೇನೆ ಎಂದರು. ಸುಮಾರು ೭೦ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದವು. ನೂರಾರು ಯುವಕರು ಉದ್ಯೋಗಕ್ಕಾಗಿ ನೋಂದಣಿ ಮಾಡಿದ್ದರು. ಅನೇಕ ಯುವಕ-ಯುವತಿಯರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಯಿತು. ಸಮಾರಂಭದಲ್ಲಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಹೆಚ್. ನಿಂಗಪ್ಪ, ಜೆಡಿಎಸ್ ಮುಖಂಡರಾದ ಗುಬ್ಬಿ ನಾಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಆರ್.ಎಸ್.ಎಸ್. ಸಂಚಾಲಕ ರವೀಂದ್ರ, ಮಹಿಲಾ ಮುಖಂಡರಾದ ರೇಖಾ ಅನೂಫ್, ಜೆಡಿಎಸ್ ನಗರಾಧ್ಯಕ್ಷ ರಾಜು ಕಂಚಾಘಟ್ಟ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ ಸೇರಿದಂತೆ ಅನೇಕ ಮುಖಂಡರುಗಳು ವಿದ್ಯಾರ್ಥಿಗಳು ಮತ್ತು ಉಧ್ಯೋಗಾಕಾಂಕ್ಷಿಗಳು ಇದ್ದರು.