ಸಂವಿಧಾನದ ಆಶಯಗಳನ್ನು ಅರಿತು, ಅವುಗಳ ಸಾಕಾರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಶಾಸಕ । ಸಂವಿಧಾನವು ಕೇವಲ ಕಾನೂನು ದಾಖಲೆಯಲ್ಲ, ಅದೊಂದು ಸಾಮಾಜಿಕ ಕೃತಿ
ಕನ್ನಡಪ್ರಭ ವಾರ್ತೆ ಗದಗಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದಲ್ಲಿ ಶಾಂತಿ, ಸುರಕ್ಷತೆ ಹಾಗೂ ಸುವ್ಯವಸ್ಥೆ ನೆಲೆಸಲು ಸಂವಿಧಾನವೇ ಪ್ರಮುಖ ಆಧಾರವಾಗಿದೆ. ಸಂವಿಧಾನದ ಆಶಯಗಳನ್ನು ಅರಿತು, ಅವುಗಳ ಸಾಕಾರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಮೂಲಕ ಹೆಚ್ಚಿನ ಪ್ರಯೋಜನ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದವರೇ ಸಂವಿಧಾನ ದಿನಾಚರಣೆಯಿಂದ ದೂರ ಉಳಿಯುತ್ತಿರುವುದು ಖೇದಕರ ಹಾಗೂ ವಿಷಾದನೀಯ ಸಂಗತಿಯಾಗಿದೆ ಎಂದರು.ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನಗಳ ಸರಾಸರಿ ಬಾಳಿಕೆ ಸುಮಾರು 19 ವರ್ಷಗಳಷ್ಟಿದೆ. ಆದರೆ, ಭಾರತ ಸಂವಿಧಾನವು 77 ವರ್ಷಗಳಾದರೂ ಸದೃಢವಾಗಿ, ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಇದು ನಮ್ಮ ಸಂವಿಧಾನದ ಶ್ರೇಷ್ಠತೆ ಮತ್ತು ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನವು ಕೇವಲ ಆಡಳಿತಾತ್ಮಕ ಕಾನೂನು ದಾಖಲೆಯಲ್ಲ, ಅದೊಂದು ಸಾಮಾಜಿಕ ಕೃತಿಯಾಗಿದೆ. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವನೆ ಮೂಡಿಸುವ ಶಕ್ತಿ ಸಂವಿಧಾನಕ್ಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಅಸ್ಪೃಶ್ಯತೆ ಸೇರಿ ಹಲವು ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿ ನೆಲೆಸಿದ್ದವು. ಸಂವಿಧಾನದ ಜಾರಿಯ ನಂತರ ಸಮಾಜದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಅವಕಾಶ ಮತ್ತು ಗೌರವ ದೊರೆಯಲು ಸಂವಿಧಾನ ದಾರಿದೀಪವಾಗಿದೆ ಎಂದು ಹೇಳಿದರು.
ಸಮರ್ಥ ಹಾಗೂ ಚಾರಿತ್ರ್ಯವಂತ ವ್ಯಕ್ತಿಗಳಿಂದ ಮಾತ್ರ ಸದೃಢ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಸಾಧ್ಯ. ಸಂವಿಧಾನದ ಆಶಯಗಳನ್ನು ಅರಿತವರು ಉತ್ತಮ ಆಡಳಿತ ನೀಡಲು ಸಮರ್ಥರಾಗಿರುತ್ತಾರೆ ಎಂದರು. ಎಚ್.ಸಿ.ಇ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ಡಿ.ಜಿ. ಜೋಗಣ್ಣನವರ ಮುಂತಾದವರು ಮಾತನಾಡಿದರು. ಶರೀಷ್ ಬಿಳಿಯಲಿ ಹಾಗೂ ತಂಡದವರು ಸಂವಿಧಾನ ಜಾಗೃತಿ ಗೀತೆಯನ್ನು ಹಾಡಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸಂವಿಧಾನದ ಪೀಠಿಕೆ ಬೋಧಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಎಸ್.ಎನ್. ಬಳ್ಳಾರಿ, ಬಸವರಾಜ ಕಡೇಮನಿ, ಪ್ರೊ. ಸಂಗಮೇಶ್, ಅನಂತ ಸಿಂಗಾಡಿ, ಮಾರ್ತಾಂಡಪ್ಪ ಹಾದಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ ಸ್ವಾಗತಿಸಿದರು. ಬಾಹುಬಲಿ ಜೈನರು ನಿರೂಪಿಸಿ ವಂದಿಸಿದರು.