ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ನಮ್ಮ ಧರ್ಮದ ಜೊತೆಗೆ ಎಲ್ಲಾ ಧರ್ಮದ ಆಚರಣೆಗಳನ್ನು ನಾವು ಗೌರವಿಸಬೇಕು, ಪರಸ್ಪರ ಸಹಬಾಳ್ವೆ ಜೀವನ ನಡೆಸಬೇಕು. ಆಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಚಿತ್ರದುರ್ಗದ ಶ್ರೀ ಗುರುಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ ನುಡಿದರು.ಅವರು ನಗರದ ದರ್ಗಾ ಮುಂಭಾಗದ ಆಸಿಂ ಲೇಔಟ್ ನಲ್ಲಿ ಹಜರತ್ ಸೈಯದ್ ಖಾದರ್ ಶಾ ಖಾದ್ರಿ ಅವರ ನೇತೃತ್ವದಲ್ಲಿ ನಡೆದ ೨೦ನೇ ಉರುಸ್ ಮಹೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಪಹಲ್ಗಾಂ ದಾಳಿಯ ನಂತರ ನಡೆದ ಆಪರೇಷನ್ ಸಿಂದೂರ ಸಮಯದಲ್ಲಿ ಬೆಳಗಾಂ ಮೂಲದ ಮುಸ್ಲಿಂ ಯೋಧೆ ಯುದ್ಧ ವಿಮಾನದ ಮೂಲಕ ನೆರೆ ರಾಷ್ಟ್ರ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದ್ದರು, ಇಲ್ಲಿ ಎಲ್ಲಾ ಧರ್ಮಗಳು ಒಂದೇ, ದೇಶದ ಹಿತ ಕಾಯುವ ಸಂದರ್ಭ ಬಂದಾಗ ನಾವೆಲ್ಲರೂ ಭಾರತೀಯರು, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಧರ್ಮಗಳ ನಡುವೆ ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.
ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಎಲ್ಲಾ ಧರ್ಮದಲ್ಲೂ ಸಮನ್ವಯತೆ ಬರಬೇಕಾದರೆ ಸರ್ವಧರ್ಮ ಸಮ್ಮೇಳನಗಳು ನಡೆಯಬೇಕು. ಆಗ ಎಲ್ಲರೂ ಕೂಡ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತದೆ. ಸರ್ವ ಧರ್ಮ ಸಮ್ಮೇಳನದಲ್ಲಿ ಎಲ್ಲಾ ಧರ್ಮದವರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ದೇವರು ಒಬ್ಬನೇ ನಾಮ ಹಲವು, ದೇವರನ್ನು ಸೃಷ್ಟಿ ಮಾಡಿಕೊಂಡಿರುವುದು ಮನುಷ್ಯರು. ಎಲ್ಲಾ ಮಾನವರ ರಕ್ತವೂ ಕೆಂಪು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಎಂಬ ಸಂದೇಶವನ್ನು ಕೊಡುತ್ತಿರುವ ಸೈಯದ್ ಖಾದ್ರಿ ಪೀರ್ ಶಾ ಅವರಿಗೆ ಧನ್ಯವಾದಗಳು. ಇಂಥ ಪುಣ್ಯ ಕೆಲಸ ಮಾಡಿದರೆ ದೇಶದಲ್ಲಿ ಐಕ್ಯತೆ ಬರಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಕೇದಾರಲಿಂಗ ಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಹಿರೇಮಠ ಚನ್ನಗಿರಿ ಹಾಗೂ ದಾವಣಗೆರೆಯ ಯರಗುಂಟೇಶ್ವರ ಕ್ಷೇತ್ರದ ಪೂಜ್ಯ ಪರಮೇಶ್ವರ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದು. ಕಾರ್ಯಕ್ರಮದಲ್ಲಿ ಸೈಯದ್ ಬದುರ್ದ್ದೀನ್ ಶಾ ಖಾದ್ರಿ ಗಂಗಾವತಿ ರವರು ಹಾಗೂ ಮೌಲಾನ ಮುಸ್ತಫಾ ಕಮಲ್ ಸಾಬ್ ಗಂಗಾವತಿ ಹಾಗೂ ಸೈಯದ್ ಖಾದರ್ ಶಾ ಖಾದ್ರಿ, ನಗರ ಸಭೆ ಅಧ್ಯಕ್ಷ ಮೊಹಮದ್, ಸದಸ್ಯ ಪರ್ಮನ್, ಮಾಜಿ ನಗರಸಭಾ ಅಧ್ಯಕ್ಷರಾದ ಅಮಾನುಲ್ಲಾ ಖಾನ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಹಜರತ್ ಆಶ್ರಫ್ ಅಲಿ, ಉಜ್ಜನೀಯ ರಹಮತುಲ್ಲಾ ಶಾ ಖಾದ್ರಿ, ಭಾಗವಹಿಸಿದ್ದರು.
ಗಂಜಿಗುಂಟೆ ಕೃಷ್ಣಮೂರ್ತಿಯವರಿಂದ ಭಾವೈಕ್ಯ ಗೀತೆಗಳನ್ನು ಸಾದರಪಡಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಶಿರಾ ಶಾಹಿದ್ ನೆರವೇರಿಸಿದರು. ಕಾರ್ಯಕ್ರಮವು ಶಿರಾದ ಹಜರತ್ ಸೈಯದ್ ಖಾದರ್ ಶಾ ಖಾದ್ರಿ ರವರ ನೇತೃತ್ವದಲ್ಲಿ ನಡೆಯಿತು