ಬಾಲ್ಯ ವಿವಾಹ ಮಟ್ಟಹಾಕಲು ಕಾನೂನು ಅಸ್ತ್ರ ಬಳಕೆ ಮಾಡಿಕೊಂಡು ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಬಾಲ್ಯ ವಿವಾಹ ಎಂಬ ಅನಿಷ್ಠ ಪದ್ಧತಿ ಮನುಕುಲಕ್ಕೆ ಅಂಟಿದ ಶಾಪ. ಇದರ ನಿರ್ಮೂಲನೆಗೆ ಪ್ರತಿಯೊಬ್ಬ ಪ್ರಜೆ ಪಣ ತೊಡಬೇಕು. ಬಾಲ್ಯ ವಿವಾಹ ಮಟ್ಟಹಾಕಲು ಕಾನೂನು ಅಸ್ತ್ರ ಬಳಕೆ ಮಾಡಿಕೊಂಡು ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಶಾಂತೇಶ್ವರ ಕಾಲೇಜನಲ್ಲಿ ಕೇಂದ್ರ ಸಂವಹನ ಇಲಾಖೆ, ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಶ್ರೀ ಶಾಂತೇಶ್ವರ ವಿದ್ಯಾವರ್ದಕ ಸಂಘ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಹಾಗೂ ರಾಷ್ಟ್ರೀಯ ಗೀತೆ ವಂದೇ ಮಾತರಂ 150ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗೆ ಎಲ್ಲರೂ ಕಟಿಬದ್ಧರಾಗಿ ಶ್ರಮಿಸಬೇಕು. ಬಾಲ್ಯದಲ್ಲಿರುವ ಮಗುವಿನ ಭವಿಷ್ಯ, ಸ್ವಾತಂತ್ರ್ಯವನ್ನು ಈ ಅನಿಷ್ಟ ಪದ್ಧತಿ ಕಿತ್ತುಕೊಂಡಿದೆ. ಮಗುವಿನ ಭವಿಷ್ಯ ಉತ್ತಮಗೊಳ್ಳಲು, ವಿದ್ಯಾಭ್ಯಾಸ, ಬದುಕು ಸುಂದರಗೊಳ್ಳಲು, ಮಗುವಿಗೆ ಮುಕ್ತವಾಗಿ ಬದುಕಲು ಅಧಿಕಾರ ನೀಡಬೇಕೆಂದರೆ ಬೇರು ಮಟ್ಟದಿಂದ ಇದನ್ನು ಅಳಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

ಪ್ರತಿಯೊಬ್ಬರೂ ಜಾಗೃತರಾಗಿ ಯುವಜನತೆಗೆ, ಪಾಲಕರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹ ಮಾಡುವುದರಿಂದ ಯುವಜನತೆ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯವಿವಾಹ ಮಾಡುವುದರಿಂದ ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ನಡೆಯದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದರು.

ರಾಷ್ಟ್ರೀಯ ಭಾವನೆ ಮೂಡಿಸುವ ಒಂದೇ ಮಾತರಂ ಗೀತೆ, 150 ವರ್ಷಗಳ ಹಿಂದೆ ದೇಶದ ಜನ ಯಾವ ರೀತಿ ಬದುಕಬೇಕು. ಯಾವ ಮಾರ್ಗದಲ್ಲಿ ನಡೆಯಬೇಕು ಎಂದು ಗೀತೆ ರಚನೆ ಮಾಡಿದ್ದಾರೆ. ಗೀತೆಯ ಸಾರದಂತೆ ದೇಶದ ಜನ ನಡೆದುಕೊಳ್ಳಬೇಕು. ವಂದೇ ಮಾತರಂ ತಾಯಿ ವಂದಿಸುವೆ ಈ ಮಾತಿನ ಮೋಡಿ ಎಂತಾದ್ದು? ಈ ಮಾತಿನ ಮೋಡಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಜನ ನಗುನಗುತ್ತಾ ನೇಣು ಗಂಭವನ್ನೇರಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ರಕ್ತದ ಕಣಕಣಗಳಲ್ಲಿ ಕ್ಷಣ ಮಾತ್ರದಲ್ಲಿ ದೇಶಭಕ್ತಿಯ ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದ್ದ ರಣಮಂತ್ರ ವಂದೇ ಮಾತರಂ ಗೀತೆಯಾಗಿದೆ. ವಂದೆ ಮಾತರಂ ಸಂದೇಶ ಈಗಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ. ಬಂಕಿಮ ಚಂದ್ರರು ಈ ಹಾಡು ಬರೆದಿದ್ದು ತ್ಯಾ ಗ ಬಲಿದಾನದ ಸಂಕೇತ ಎಂದರು.

ಮಹಿಳಾ ಮತ್ತು ಮಕ್ಕಳ ಅಧಿಕಾರಿ ಗೀತಾ ಗುತ್ತರಗಿಮಠ ಮಾತನಾಡಿ, ನಮ್ಮಲ್ಲಿ ೧೦೦೦ ಪುರುಷರಿಗೆ ೯೩೫ ಮಹಿಳೆಯರು ಇದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕಾಯ್ದೆ, ಪೋಕ್ಸೋ ಇದರ ಉಪಯೋಗ ಪಡೆದು ಮಕ್ಕಳನ್ನು ಸದೃಢ ಮಾಡಬೇಕಾಗಿದೆ. ಬೇಗನೆ ಮದುವೆ ಮಾಡಿದರೆ ಅದರ ದುಷ್ಪರಿಣಾಮ ಮಕ್ಕಳ ದೇಹದ ಮೇಲೆ ಆಗುತ್ತದೆ ಎಂದರು.

ಕೇಂದ್ರ ಸಂವಹನ ಇಲಾಖೆ ಅಧಿಕಾರಿ ಸಿ.ಕೆ.ಸುರೇಶ, ಗಾಂಧಿ ನಿಲೇಶ ಬೇನಾಳ ಬಸವರಾಜ ಗೊರನಾಳ, ಲಲಿತಾ ಮಾದರ ಮಾತನಾಡಿದರು. ಸೀಮಂತ ಕಾರ್ಯಕ್ರಮ ನಡೆಯಿತು. ವೇದಿಕೆ ಮೇಲೆ ಸಂಸ್ಥೆ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಭಿಮಣ್ಣ ಕವಲಗಿ, ಶಿವಯೋಗಪ್ಪ ಚನಗೊಂಡ, ದತ್ತಾ ಕುಲಕರ್ಣಿ, ನಂದಿಪ ರಾಠೋಡ , ಪುತಳಾಬಾಯಿ ಭಜಂತ್ರಿ ಇದ್ದರು.