ಹಳ್ಳಿಗರು ನರೇಗಾ ಯೋಜನೆಯ ಪ್ರಯೋಜನ ಪಡೆಯಲಿ: ಸಂತೋಷ ಗೌಡ

| Published : Nov 07 2024, 11:49 PM IST

ಸಾರಾಂಶ

ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ.

ಕಾರವಾರ: ಮಹಾತ್ಮ ಗಾಂಧಿ ನರೇಗಾದಡಿ ಲಭ್ಯವಿರುವ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಗ್ರಾಪಂ ವ್ಯಾಪ್ತಿಯ ಪ್ರತಿಯೊಬ್ಬ ನಾಗರಿಕರು ಕೂಡಲೇ ಬೇಡಿಕೆ ಅರ್ಜಿ ಸಲ್ಲಿಸಬೇಕು ಎಂದು ತಾಲೂಕಿನ ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ಸಂತೋಷ ಗೌಡ ಸಾರ್ವಜನಿಕರಲ್ಲಿ ಕೋರಿದರು. ತಾಲೂಕಿನ ದೇವಳಮಕ್ಕಿ ಗ್ರಾಪಂ ಸಭಾಂಗಣದಲ್ಲಿ 2025- 26ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕೆಗಾಗಿ ಗುರುವಾರ ಆಯೋಜಿಸಿದ್ದ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಾಗೂ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಈಯೋಜನೆ ಜಾರಿಯಾಗಿದ್ದು, ಹೆಣ್ಣು- ಗಂಡಿಗೆ ಸಮಾನ ಕೂಲಿ, ಹಿರಿಯ ನಾಗರಿಕರಿಗೆ, ಗರ್ಭಿಣಿ- ಬಾಣಂತಿಯರಿಗೆ, ಅಂಗವಿಕಲರಿಗೆ ರಿಯಾಯಿತಿ ನೀಡಿ ಸಮುದಾಯ ಕಾಮಗಾರಿಗಳಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನ ಕೂಲಿ ಕೆಲಸ ಕೊಡಲಾಗುತ್ತಿದೆ ಎಂದರು.

ಪ್ರತಿದಿನಕ್ಕೆ ₹349 ಕೂಲಿ ಮೊತ್ತ ನೀಡುತ್ತಿದೆ. ಅಗತ್ಯ ಸಹಾಯಧನದಡಿ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯಡಿ ಹಲವು ವೈಯಕ್ತಿಕ ಕಾಮಗಾರಿಗಳು ಲಭ್ಯವಿದ್ದು, ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು. ಆದ್ದರಿಂದ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರು ಇನ್ನೂ ಬೇಡಿಕೆ ಸಲ್ಲಿಸದಿದ್ದರೆ ಕೂಡಲೇ ಗ್ರಾಪಂಗೆ ಭೇಟಿ ನೀಡಿ ಬೇಡಿಕೆ ಅರ್ಜಿ ಸಲ್ಲಿಸಬೇಕು ಎಂದರು.ಜಿಲ್ಲಾ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ ನರೇಗಾ ಮಾಹಿತಿ ಹಾಗೂ ಕ್ಯೂ ಆರ್‌ ಕೋಡ್‌ಯುಳ್ಳ ಕರಪತ್ರಗಳನ್ನು ವಿತರಿಸಿ ಮಾತನಾಡಿ, ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗಾಗಿ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕವಾಗಿ ₹34,800 ನೀಡಲಾಗುತ್ತದೆ. ಹಾಗೆಯೇ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿ, ಕೋಳಿ, ಮೇಕೆ, ಹಂದಿ ಶೇಡ್, ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ನಿಂಬೆ, ಸಿಬೆ, ದಾಳಿಂಬೆ, ಕಾಳುಮೆಣಸು, ಲವಂಗ ಸೇರಿದಂತೆ ಇನ್ನಿತರೆ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು. ಈ ಎಲ್ಲ ಕಾಮಗಾರಿಗಳನ್ನು ಪಡೆದುಕೊಳ್ಳಲು ಗ್ರಾಪಂಗೆ ತೆರಳಿ ನಮೂನೆ 6 ರಲ್ಲಿ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಬೇಕು ಎಂದರು.ಗ್ರಾಪಂ ಉಪಾಧ್ಯಕ್ಷೆ ಕೋಮಲ ದೇಸಾಯಿ, ಸದಸ್ಯರಾದ ಸಂತೋಷ ಗುನಗಿ, ಕಮಲಾ ವಾಲ್ಮೀಕಿ, ಸಂತೋಷ ಗಾಂವಕರ, ರೂಪಾ ಹುಲಸ್ವಾರ, ಸುವರ್ಣಾ ಗಾಂವಕರ, ಪ್ರತಿಕ್ಷಾ ವೈಂಗಣಕರ, ಗ್ರಾಮ ಸಭೆ ನೋಡಲ್ ಅಧಿಕಾರಿ ಸುರೇಶ ಗಾಂವಕರ, ಕಿನ್ನರ ಉಪ ತಹಸೀಲ್ದಾರ್ ಶ್ರೀಧರ ನಾಯ್ಕ, ಅಭಿವೃದ್ಧಿ ಅಧಿಕಾರಿ ರಘುನಂದನ್ ಮಡಿವಾಳ, ಡಿಆರ್‌ಎಫ್‌ಒ ಸುಭಾಷ್ ರಾಠೋಡ, ಕಾರ್ಯದರ್ಶಿ ಸೂರಜ್ ಮಿರಾಶಿ ಮೊದಲಾದವರು ಇದ್ದರು.