ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆ ಈ ದೇಶದ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಇದೆ. ಆದನ್ನು ಸದುಪಯೋಗ ಪಡಿಸಿಕೊಳ್ಳಲು ಕುಶಲಕರ್ಮಿಗಳು ಮುಂದೆ ಬರಬೇಕು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.ಮೂಡಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಪ್ರಧಾನ ಉಪನ್ಯಾಸ ನೀಡಿದ ಮುನಿಯಾಲು ಜಿ.ಎಸ್. ಪುರಂದರ ಪುರೋಹಿತರು ಈ ಪ್ರಪಂಚದ ಸೃಷ್ಟಿಕರ್ತ ಪರಬ್ರಹ್ಮ ವಿಶ್ವಕರ್ಮನಿಗೆ ಆರಂಭ. ಅಂತ್ಯ ಎಂಬುದಿಲ್ಲ. ಪಂಚದೇವತಾಶಕ್ತಿ, ಪಂಚದೇವತಾ ತತ್ವ, ಜ್ಞಾನಸ್ವರೂಪಿ ಪಂಚಋಷಿಗಳು, ಪಂಚಗೋತ್ರಗಳು, ಪಂಚಮ ವೇದ ಮೊದಲಾದ ವಿಚಾರಗಳನ್ನು ತಿಳಿಸಿ, ಪ್ರಪಂಚದ ಎಲ್ಲ ಶಿಲ್ಪ, ತಂತ್ರಜ್ಞಾನಗಳಿಗೆ ಮೂಲಚೇತನವಾದ ವಿಶ್ವಕರ್ಮ ಎಂಬ ಶಕ್ತಿ, ತತ್ವವನ್ನು ಸದಾ ಮನವರಿಕೆ ಮಾಡಿಕೊಳ್ಳಬೇಕು ಎಂದರು.ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಪುರೋಹಿತ ಎನ್. ಜಯಕರ ಆಚಾರ್ಯ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಅಲಂಗಾರು ಶ್ರೀ ಅಯ್ಯಸ್ವಾಮಿ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಆಚಾರ್ಯ, ಪಿಎಸ್‌ಐ ಸಿದ್ದಪ್ಪ, ಉಪತಹಸೀಲ್ದಾರ್ ಬಾಲಚಂದ್ರ ಮುಖ್ಯಅತಿಥಿಗಳಾಗಿದ್ದರು.
ಧನಂಜಯ ಮೂಡುಬಿದಿರೆ ಮಾತನಾಡಿ, ವಿಶ್ವಕರ್ಮ ಜಯಂತಿ ಸಂದರ್ಭ ವಿವಿಧ ಕುಶಲಕರ್ಮಿಗಳ ವಸ್ತು ಪ್ರದರ್ಶನ, ಹೊಸ ಸಂಶೋಧನೆಗಳಿಗೆ ಪುರಸ್ಕಾರ ಇವನ್ನೆಲ್ಲ ನಡೆಸಲು ಎಲ್ಲ ಸಮುದಾಯಗಳ ಕುಶಲಕರ್ಮಿಗಳನ್ನು ಪ್ರಾತಿನಿಧಿಕವಾಗಿರಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು.ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಆಡಳಿತ ಸಮಿತಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಹೊಸಬೆಟ್ಟು, ಕಾರ್ಯದರ್ಶಿ ಸುಧಾಕರ ಆಚಾರ್ಯ ಹೊಸಬೆಟ್ಟು, ಮಹಿಳಾ ಸಮಿತಿಯ ಜಯಶ್ರೀ ಜಗನ್ನಾಥ ಪುರೋಹಿತ, ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನವೀನ ಆಚಾರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಗಣೇಶ ಆಚಾರ್ಯ, ನೆಲ್ಲಿಕಾರು ಹರೀಶ ಆಚಾರ್ಯ, ಗುರುಕಾಷ್ಟ ಶಿಲ್ಪ ಸಮಿತಿ ಅಧ್ಯಕ್ಷ ಜಗದೀಶ ಆಚಾರ್ಯ ಮೊದಲಾದವರಿದ್ದರು.
ಉಪತಹಸೀಲ್ದಾರ್ ರಾಮ ಕೆ. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.