ಮಹಿಳೆಯರ ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಮಹಿಳೆಯರೂ ಅದನ್ನು ಅಷ್ಟೇ ಪ್ರಾಮಾಣಿಕವಾಗಿ ಬಳಕೆ ಮಾಡಿಕೊಂಡು ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಮುಂಡರಗಿ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಕಾಮನ್ ಸರ್ವಿಸ್ ಸೆಂಟರ್(ಸಿಎಸ್‌ಸಿ) ಮೂಲಕ ಅನೇಕ ಸರ್ಕಾರಿ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ ಎಂದು ಕೊಪ್ಪಳದ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ. ತಿಳಿಸಿದರು.ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕು ವತಿಯಿಂದ ಪಟ್ಟಣದ ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಬರುವ ಭಕ್ತರು ಹುಂಡಿಗೆ ಹಾಕುವ ಕಾಣಿಕೆ ಹಣವನ್ನು ಮರಳಿ ಸಾಲ ಹಾಗೂ ಸಹಾಯಧನ, ಪ್ರೋತ್ಸಾಹಧನ, ಶಾಲಾಭಿವೃದ್ದಿ, ಕೆರೆಗಳ ಅಭಿವೃದ್ಧಿ ಸೇರಿ ವಿವಿಧ ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ ಸ್ವಯಂ ಉದ್ಯೋಗ ಮಾಡುವ ಮೂಲಕ ಯಶಸ್ವಿ ಜೀವನ ನಡೆಸಬೇಕು ಎಂದರು.

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಹಿಳೆಯರ ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಮಹಿಳೆಯರೂ ಅದನ್ನು ಅಷ್ಟೇ ಪ್ರಾಮಾಣಿಕವಾಗಿ ಬಳಕೆ ಮಾಡಿಕೊಂಡು ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶೋಭಾ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಪಾಲಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವರವಾಗಿದೆ ಎಂದರು.

ಸರೋಜಾ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಕೆ. ಮುಲ್ಲಾನವರ, ಅನಸೂಯಾ ಬೆಟಗೇರಿ, ರಾಜೇಶ್ವರಿ ಗೊಡಕೆ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ಜೈನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಧಾ ಬಾರಕೇರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿ ಪೃಥ್ವಿರಾಜ ಜಿ.ಪಿ., ಪ್ರಿಯಾ ಬೋದನಾಪೂರ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಇರುವ ಸ್ವ ಉದ್ಯೋಗದ ಅವಕಾಶಗಳು ಕುರಿತು ತರಬೇತಿ ನೀಡಿದರು. ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಯೋಜನೆಯ ಪ್ರಗತಿ ವಿವರಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮ ನಾಯಕ ನಿರೂಪಿಸಿದರು.