ಸಾರಾಂಶ
ಶಿವಮೊಗ್ಗ: ಮಹಿಳೆಯರು ಸಣ್ಣ ಉದ್ಯಮಗಳತ್ತ ಹೆಚ್ಚು ಒಲವು ತೋರಬೇಕು. ಇದರಿಂದ ಅವರು ಸ್ವಾವಲಂಬಿ ಬದುಕು ಕಾಣಬಹುದು ಎಂದು ಯುನಿಯನ್ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರವಿಂದ್ ಹೆಗಡೆ ಹೇಳಿದರು.ಇಲ್ಲಿನ ಗೋಪಾಲಗೌಡ ಬಡಾವಣೆಯಲ್ಲಿರುವ ಔಷಧಿ ಭವನದಲ್ಲಿ ಬುಧವಾರ ಯುನಿಯನ್ ಬ್ಯಾಂಕ್‌ನ ಶಿವಮೊಗ್ಗ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಸಣ್ಣ ಉದ್ಯಮ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತಿನ ಸಣ್ಣ ಉದ್ಯಮ ನಾಳೆ ಬೃಹತ್ ಉದ್ಯಮವಾಗಿ ಬೆಳೆಯುತ್ತದೆ. ಹೀಗಾಗಿ ಸಣ್ಣ ಉದ್ಯಮ ಉತ್ತೇಜನ ನೀಡುವಲ್ಲಿ ಯುನಿಯನ್ ಬ್ಯಾಂಕ್ ಅಗ್ರ ಸ್ಥಾನದಲ್ಲಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿ ಆಗುವುದು ಸುಲಭದ ಮಾತಲ್ಲ. ಉದ್ಯಮಿಗಳಾಗಲು ಬಯಸಿ ಬಂದವರಿಗೆ ಸರಿ ದಾರಿ ತೋರುವುದು ಬ್ಯಾಂಕ್‌ನ ಧ್ಯೇಯವಾಗಿದೆ. ಇದನ್ನು ಯುನಿಯನ್ ಬ್ಯಾಂಕ್ ಕಳಕಳಿಯಿಂದ ಮಾಡಿಕೊಂಡು ಬಂದಿದೆ. ಆರಂಭದಲ್ಲಿ ದೇಶದಾದ್ಯಂತ 19 ಮಿಲಿಯನ್ ಮಹಿಳಾ ಗ್ರಾಹಕರು ಸಣ್ಣ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ಪಡೆದಿದ್ದರು. ಈಗ ಈ ಸಂಖ್ಯೆ 27 ಮಿಲಿಯನ್‌ಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.ನಾರಿ ಶಕ್ತಿ ಯೋಜನೆಯಡಿ ಬ್ಯಾಂಕ್‌ನಿಂದ ಮಹಿಳೆಯರು ಉದ್ಯಮ ಆರಂಭಿಸಲು ಸಾಲಸೌಲಭ್ಯ ನೀಡಲಾಗುತ್ತಿದೆ. ಜೊತೆಗೆ ಕೈಗಾರಿಕೆ ಆರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಎಂಎಸ್‌ಎಂಇ(MSME) ಯೋಜನೆಯಡಿ 18 ವಿವಿಧ ಯೋಜನೆಗಳಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಮಹಿಳೆಯರು ಇದರ ಉಪಯೋಗ ಪಡೆದುಕೊಂಡು ಉದ್ಯಮಿಗಳಾಗಿ ಬೆಳೆಯಲು ಮುಂದೆ ಬರಬೇಕೆಂದು ಕರೆ ನೀಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಯುನಿಯನ್ ಬ್ಯಾಂಕ್ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. 1919ರಲ್ಲಿ ಪ್ರಾರಂಭವಾಗಿರುವ ಯುನಿಯನ್ ಬ್ಯಾಂಕ್ 100 ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆ ಪಡೆದಿದೆ. ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ ಎಂದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಗ್ರಾಹಕರು ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯದಿಂದ ಇರಬೇಕು. ಸಾಲ ಪಡೆದ ಗ್ರಾಹಕರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ಬ್ಯಾಂಕ್‌ಗಳು ಜನಸ್ನೇಹಿಯಾದಾಗ ಹೆಚ್ಚು ಸಹಕಾರಿಯಾಗುತ್ತವೆ ಎಂದರು.ಕಾರ್ಯಾಗಾರದಲ್ಲಿ ಬ್ಯಾಂಕ್‌ನ ಸಹಾಯಕ ಉಪ ಪ್ರಬಂಧಕ ಮುರುಳಿಧರ್ ಮತ್ತು ರವಿಚಂದ್ರನ್ ಸೇರಿದಂತೆ ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.
ಸರ್ಕಾರದ ಸೌಲಭ್ಯ ಪ್ರಯೋಜನ ಪಡೆಯಿರಿದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಣ್ಣ ಉದ್ಯಮಗಳು ಪೂರಕವಾಗಿವೆ. ಹೀಗಾಗಿ ಸರ್ಕಾರಗಳು ಬ್ಯಾಂಕ್‌ಗಳ ಮೂಲಕ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಯುನಿಯನ್ ಬ್ಯಾಂಕ್ ಇಂದು ದೇಶದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಗಿ ಬೆಳೆದು ನಿಂತಿದೆ ಎಂದು ಯುನಿಯನ್ ಬ್ಯಾಂಕ್ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಮುಖ್ಯಸ್ಥ ಯು.ವಿಶು ಕುಮಾರ್ ತಿಳಿಸಿದರು.
ದೇಶದ 300 ಕಡೆ ಈ ಮಾಹಿತಿ ಕಾರ್ಯಾಗಾರ ನಡೆಯುತ್ತಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲಾ ಶಾಖೆಗಳನ್ನೊಳಗೊಂಡು ಇಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಸಾಲಸೌಲಭ್ಯ ನೀಡುವ ಮೇಳ ಅಲ್ಲ, ಇದರ ಮೂಲಕ ಜನರಲ್ಲಿ ಬ್ಯಾಂಕ್‌ನ ಸಾಲಸೌಲಭ್ಯದ ಬಗ್ಗೆ ಅರಿವು ಮೂಡಬೇಕಿದೆ. ಇಂದು ಸರ್ಕಾರಗಳು ಬ್ಯಾಂಕ್ ಮೂಲಕ ಅನೇಕ ಯೋಜನೆಗಳನ್ನು ಜನರಿಗೆ ನೀಡಿದೆ. ಅವುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಸರ್ಕಾರ ಬ್ಯಾಂಕ್‌ಗಳ ಮೂಲಕ ನೀಡುತ್ತಿರುವ ಅನೇಕ ಸೌಲಭ್ಯಗಳ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದರು.