ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲಿ

| Published : Mar 09 2024, 01:35 AM IST

ಸಾರಾಂಶ

ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದರೆ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದರೆ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಅಭಿಪ್ರಾಯಪಟ್ಟರು.ನಗರದ ನ್ಯಾಯಾಲಯ ರಸ್ತೆಯಲ್ಲಿರುವ ವಕೀಲ ರಮೇಶ್ ಪುತ್ರಿ ಮಧುಶ್ರೀ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು. ಸಮಾಜದಲ್ಲಿ ಪುರುಷರಷ್ಟೆ ಸಮಾನವಾಗಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಗಗನಯಾನ, ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವರ ಸಾಧನೆ ಹೆಜ್ಜೆ ಗುರುತಾಗಿ ಉಳಿದಿದೆ. ಹೀಗಿದ್ದರೂ ಕೂಡ ಮಹಿಳೆ ಮೇಲೆ ದೌರ್ಜನ್ಯ, ಕೀಳರಿಮೆ ಭಾವನೆ ಜೀವಂತವಾಗಿದ್ದು, ಜಾಗೃತಿ ಮೂಡಿಸಬೇಕಾಗಿದೆ ಎಂದರು.ನ್ಯಾಯಾಂಗ ಇಲಾಖೆಯಲ್ಲೂ ಮಹಿಳೆಯರು ಸುಪ್ರೀಂ ಕೋರ್ಟ್ ವರೆಗೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಗಡಿಜಿಲ್ಲೆಯಲ್ಲಿ ಮಧುಶ್ರೀ ಸ್ವಂತ ಪರಿಶ್ರಮದಿಂದ ನ್ಯಾಯಾಂಗ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶರಾಗಿರುವುದು ಹೆಮ್ಮೆಯ ವಿಷಯವಾಗಿದೆ. ತಮ್ಮ ಹುದ್ದೆಯಲ್ಲಿ ಇನ್ನಷ್ಟು ಸಾಧಿಸಿ ಒಳ್ಳೆಯ ಹೆಸರುಗಳಿಸಲಿ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದಲ್ಲಿ ಬದಲಾವಣೆ, ಅಭಿವೃದ್ಧಿ ಸಾಧ್ಯವಾಗುತ್ತದೆ. ನಮ್ಮ ಜಿಲ್ಲೆಯ ಮಧು ಶ್ರೀರವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ತುಂಬ ಸಂತಸ ತಂದಿದೆ ಎಂದರು. ಸನ್ಮಾನ ಸ್ವೀಕರಿಸಿದ ನೂತನ ನ್ಯಾಯಾಧೀಶೆ ಮಧುಶ್ರೀ ಮಾತನಾಡಿ, ಬಡವರಿಗೆ, ಅವಕಾಶ ವಂಚಿತರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಕೀಲ ರಮೇಶ್, ಶಿಕ್ಷಕಿ ಸುವರ್ಣಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಬೆಟಗೇರಿ, ಚಿರಂತ್, ನಿರಂತ್ ಹಾಜರಿದ್ದರು.