ಮಹಿಳೆಯರು ಎಲ್ಲಾ ಆಯಾಮಗಳಲ್ಲೂ ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಅವುಗಳನ್ನು ವಿಮಶೆಗೊಳಪಡಿಸುವ ಅಗತ್ಯವಿದೆ. ವಿಮರ್ಶೆಗೊಳಪಡಿಸುವ ಕೆಲಸವನ್ನು ಲೇಖಕಿಯರ ಸಂಘ ಮಾಡಬೇಕು. ಇದರಿಂದ ಅತ್ಯುತ್ತಮ ಕೃತಿಗಳು ಹೊರಬರಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಮಣ್ಣು ಸಾಮಾನ್ಯ ಮಣ್ಣಲ್ಲ. ಈ ಮಣ್ಣಿನೊಳಗೆ ರಾಷ್ಟ್ರಮಟ್ಟದಲ್ಲಿ ದಾಖಲಿಸುವಂತಹ ಹಲವಾರು ಘಟನಾವಳಿಗಳು ನಡೆದಿವೆ. ಹಾಗಾಗಿ ಈ ಪಾವನ ಮಣ್ಣಿನಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಮೀಸಲಾತಿಯ ಹಕ್ಕೊತ್ತಾಯ ಮಂಡನೆಯಾಗಬೇಕು ಎಂದು ಮೈಸೂರು ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಅನಿಸಿಕೆ ವ್ಯಕ್ತಪಡಿಸಿದರು.

ಶನಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕದಿಂದ ನಡೆಯುತ್ತಿರುವ ಜಿಲ್ಲಾ ಲೇಖಕಿಯರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಎಲ್ಲಾ ಆಯಾಮಗಳಲ್ಲೂ ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಅವುಗಳನ್ನು ವಿಮಶೆಗೊಳಪಡಿಸುವ ಅಗತ್ಯವಿದೆ. ವಿಮರ್ಶೆಗೊಳಪಡಿಸುವ ಕೆಲಸವನ್ನು ಲೇಖಕಿಯರ ಸಂಘ ಮಾಡಬೇಕು. ಇದರಿಂದ ಅತ್ಯುತ್ತಮ ಕೃತಿಗಳು ಹೊರಬರಲಿವೆ ಎಂದರು.

ಕೃತಿಗಳ ವಿಮರ್ಶೆಗೊಳಪಡಿಸುವ ಮೂಲಕ ಮಹಿಳಾ ಲೇಖಕಿಯರಿಗೆ ಬಹುಶಿಸ್ತೀಯ ವೇದಿಕೆ ಸೃಷ್ಟಿಸಬೇಕು. ಆಗ ಯಾವುದೇ ಸಮಸ್ಯೆಗಳ ಬಗ್ಗೆ ಚಿಂತಿಸಿ, ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದು ರಾಷ್ಟ್ರಮಟ್ಟದಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸುವಂತಿರಬೇಕು. ಅದಕ್ಕಾಗಿಯೇ ಮಹಿಳಾ ಮೀಸಲಾತಿಯ ಹಕ್ಕೋತ್ತಾಯ ಮಂಡನೆ ಈ ಸಮ್ಮೇಳನದಿಂದಲೇ ಪ್ರಾರಂಭವಾಗಲಿ ಎಂದರು.

ಸಾಹಿತ್ಯ ಎಂಬುದು ಅಭಿವ್ಯಕ್ತಿಯ ಫಲಿತ. ಸಾಹಿತ್ಯದ ಪ್ರಾಕಾರಗಳು ಸಂಸ್ಕೃತಿ, ಪರಂಪರೆ ಸೇರಿದಂತೆ ಅನೇಕ ಮಗ್ಗಲುಗಳನ್ನು ಒಳಗೊಂಡಿದೆ. ಸಾಕಷ್ಟು ಪ್ರಾಕಾರಗಳು ನಿರ್ದಿಷ್ಟ ಕಾಲಘಟ್ಟದಲ್ಲಿ ಅಭಿವ್ಯಕ್ತಪಡಿಸಬಹುದಾಗಿದ್ದು, ಸಮಕಾಲೀನವಾಗಿವೆ. ಮಂಡ್ಯ ಜಿಲ್ಲೆಯಲ್ಲೂ ಅನೇಕ ಮಹಿಳಾ ಲೇಖಕಿಯರು, ಕವಯತ್ರಿಯರು ಉತ್ತಮ ಕೃತಿ, ಕಾದಂಬರಿ, ಕವನಗಳನ್ನು ರಚಿಸಿದ್ದಾರೆ. ಆ ಪರಂಪರೆ ಈಗಲೂ ಮುಂದುವರೆದಿದೆ ಎಂದು ಶ್ಲಾಘಿಸಿದರು.

ಮಂಡ್ಯದ ಮಣ್ಣು ಬ್ರಿಟಿಷರ ಎದೆ ನಡುಗಿಸಿತ್ತು. ಈ ಮಣ್ಣಿನ ಅನೇಕರು ಇತಿಹಾಸ ಪುಟಗಳನ್ನು ಸೇರಿದ್ದಾರೆ. ಬರೆಯುವವರಿಗೆ ಸ್ಫೂರ್ತಿದಾಯಕವಾಗಿದ್ದಾರೆ. ಸಾಹಿತ್ಯ, ರಾಜಕಾರಣ, ರಂಗಭೂಮಿ, ಕಲೆ, ಹೋರಾಟ, ಚಳವಳಿ ಸೇರಿದಂತೆ ವಿವಿಧ ಪರಂಪರೆಗೆ ನೆಲೆ ಒದಗಿಸಿದ್ದಾರೆ. ಜಿಲ್ಲೆಯ ಸಾಹಿತ್ಯವನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ವಿಭಿನ್ನತೆಯಿಂದ ಕೂಡಿರುವ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ಪರಿಚಯಿಸುವ ಕೆಲಸ ಆಗಿದೆ ಎಂದರು.

ಲೇಖಕಿಯರಾದ ತ್ರಿವೇಣಿ, ಆರ್ಯಾಂಭ ಪಟ್ಟಾಭಿ, ಜಯಲಕ್ಷ್ಮಿ ಸೀತಾಪುರ ಸೇರಿದಂತೆ ಅನೇಕರು ಮಹಿಳಾ ಲೇಖಕಿಯರು ಸ್ತ್ರೀಗೆ ಸಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಸೃಜನಶೀಲತೆ ಸಾಹಿತ್ಯಕ್ಕಿಂತ ಸೃಜನಶೀಲತೇತರ ಸಾಹಿತ್ಯ ಬರೆಯುವುದು ಕಷ್ಟ. ಅದನ್ನು ಸಾಧಿಸಿ ತೋರಿಸಿದ್ದಾರೆ. ಜಾಗೃತ ಸ್ತ್ರೀ ಪ್ರಜ್ಞೆಯನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸಾಹಿತಿಗಳಾದ ಡಾ.ಸಬಿಹಾ ಭೂಮಿಗೌಡ, ಡಾ.ಎಚ್.ಎಲ್. ಪುಷ್ಪ, ಡಾ.ಮಂಜುಳಾ ಹುಲ್ಲಹಳ್ಳಿ, ಡಾ.ಎಂ.ಕೆಂಪಮ್ಮ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಇದ್ದರು.