ಯೋಗ, ಆಯುರ್ವೇದ ಜತೆಯಾಗಿ ಸಾಗಲಿ: ಕಿರಣ್‌ ಕುಮಾರ

| Published : Aug 11 2025, 12:33 AM IST

ಯೋಗ, ಆಯುರ್ವೇದ ಜತೆಯಾಗಿ ಸಾಗಲಿ: ಕಿರಣ್‌ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಜಗತ್ತಿಗೆ ನೀಡಿದ ಮಹಾನ್‌ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಪ್ರಮುಖವಾಗಿವೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಭಾರತ ಜಗತ್ತಿಗೆ ನೀಡಿದ ಮಹಾನ್‌ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಪ್ರಮುಖವಾಗಿವೆ. ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಅವರ ಪ್ರಯತ್ನದಿಂದ ಗಿಡಮೂಲಿಕೆಗಳ ದಿವ್ಯ ಔಷಧ ಜಗತ್ತಿಗೆ ಪರಿಚಯವಾಗುವಂತಾಗಿದೆ. ಯೋಗ, ಆಯುರ್ವೇದ ಜತೆಯಾಗಿ ಸಾಗಬೇಕಿದೆ ಎಂದು ಪತಂಜಲಿ ಯುವಭಾರತ ರಾಜ್ಯ ಪ್ರಭಾರಿ ಕಿರಣ್‌ ಕುಮಾರ ಹೇಳಿದರು.

ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನ ಪ್ರಯುಕ್ತ ಭಾನುವಾರ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗಿಡಮೂಲಿಕೆ ದಿನ (ಜಡಿ ಬೂಟಿ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಚಾರ್ಯ ಬಾಲಕೃಷ್ಣ ಅವರು ಈಗಾಗಲೇ ಗಿಡಮೂಲಿಕೆಗಳು, ಆಯುರ್ವೇದದ ಮಹತ್ವ ತಿಳಿಸುವ 108 ವಿಶ್ವಕೋಶ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಜತೆಗೆ ಇನ್ನಷ್ಟು ಕೃತಿಗಳನ್ನು ರಚಿಸಿದ್ದಾರೆ. ಹರಿದ್ವಾರದ ಪತಂಜಲಿ ಯೋಗ ಕೇಂದ್ರದಲ್ಲಿ ಗಿಡಮೂಲಿಕೆಗಳಿಂದ ಔಷಧ ತಯಾರಿಸುವ ಅತ್ಯಾಧುನಿಕ ಯಂತ್ರಗಳನ್ನು ಸಹ ಸ್ಥಾಪಿಸಲಾಗಿದೆ. ಆಯುರ್ವೇದದ ಸಾರ ಅರಿಯಲು 70ಕ್ಕೂ ಅಧಿಕ ರಾಷ್ಟ್ರಗಳ ಆಸಕ್ತರು ಹರಿದ್ವಾರಕ್ಕೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಇದು ನಮ್ಮ ಶಕ್ತಿ, ಇದನ್ನು ನಾವು ಅಳವಡಿಸಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ. ಎಫ್‌.ಟಿ. ಹಳ್ಳಿಕೇರಿ ಮಾತನಾಡಿ, ನಮ್ಮ ಸುತ್ತಮುತ್ತಲಿನಲ್ಲೇ ಇರುವ ಗಿಡಮೂಲಿಕೆಗಳ ಮಹತ್ವ ತಿಳಿದುಕೊಂಡು ಅದನ್ನು ನಮ್ಮ ಆರೋಗ್ಯ ಸುಧಾರಣೆಗೆ ಬಳಸುವ ಅಗತ್ಯ ಇದೆ ಎಂದರು.

ಆರಂಭದಲ್ಲಿ ಯೋಗ ತರಬೇತಿ ನೀಡಿದ ಪತಂಜಲಿ ಕಿಸಾನ್‌ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ ಹಲವು ಗಿಡಮೂಲಿಕೆಗಳ ಔಷಧೀಯ ಗುಣಗಳ ಮಹತ್ವ ತಿಳಿಸಿದರು.

ಸಮಿತಿಯ ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್‌ ಕಾರ್ವಾ, ಯೋಗ ಸಾಧಕ ಅಕ್ಷಯ ಆಚಾರಿ ವೇದಿಕೆಯಲ್ಲಿದ್ದರು. ಯೋಗ ಸಾಧಕರಾರ ಅನಂತ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.

ನಂಜಪ್ಪ, ವಿಠೋಬಣ್ಣ, ಶಿವಮೂರ್ತಿ, ಶ್ರೀಧರ, ಶ್ರೀರಾಮ್‌, ಅಶೋಕ್ ಚಿತ್ರಗಾರ, ರಾಜಾಭಕ್ಷಿ, ಮಾರುತಿ ಪೂಜಾರ, ಶ್ರೀನಿವಾಸ ಮಂಚಿಕಟ್ಟಿ, ಚಂದ್ರಿಕಾ, ಕವಿತಾ ಆನಂದ್, ಪ್ರಮೀಳಮ್ಮ, ಶೈಲಜಾ ಕಳಕಪ್ಪ ಇತರರಿದ್ದರು.