ಸಾರಾಂಶ
ಯಾವುದೇ ವಿಷಯವನ್ನು ಜನತೆಗೆ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುವುದು ಬೋಧಕರ ಕರ್ತವ್ಯ. ಕಲ್ಲುಬಂಡೆಯಂತಿರುವವರನ್ನು ತಿದ್ದಿ, ತೀಡಿ ಮೂರ್ತಿ ಸ್ವರೂಪರನ್ನಾಗಿರಿಸುವಲ್ಲಿ ಬೋಧಕರ ಪಾತ್ರ ಮುಖ್ಯವಾದುದು ಎಂದು ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಕಲಾವತಿ ಸಂಕನಗೌಡ್ರ ಹೇಳಿದರು.
ಗದಗ: ಭವ್ಯ ಭಾರತ ನಿರ್ಮಾಣಕ್ಕೆ ಯೋಗ ಶಿಕ್ಷಕರು ಬೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಕಲಾವತಿ ಸಂಕನಗೌಡ್ರ ಹೇಳಿದರು.
ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಎಸ್‌ವೈಬಿಎಂಎಸ್ ಯೋಗ ಪಾಠಶಾಲೆಯ ಬಸವ ಯೋಗ ಕೇಂದ್ರ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಆಶುಭಾಷಣ ಮತ್ತು ಯೋಗ ಬೋಧನಾ ಕೌಶಲ್ಯ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ವಿಷಯವನ್ನು ಜನತೆಗೆ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುವುದು ಬೋಧಕರ ಕರ್ತವ್ಯ. ಕಲ್ಲುಬಂಡೆಯಂತಿರುವವರನ್ನು ತಿದ್ದಿ, ತೀಡಿ ಮೂರ್ತಿ ಸ್ವರೂಪರನ್ನಾಗಿರಿಸುವಲ್ಲಿ ಬೋಧಕರ ಪಾತ್ರ ಮುಖ್ಯವಾದುದು. ಅದರಲ್ಲೂ ಯೋಗ ಬೋಧಕರ ಪಾತ್ರ ಅತ್ಯಮೂಲ್ಯವಾದುದು. ಯೋಗವು ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ವೈದ್ಯಕೀಯ ಎಂಬಿತ್ಯಾದಿ ಶಿಕ್ಷಣ ಒಳಗೊಂಡಿದೆ. ಯೋಗವು ಕೇವಲ ಬೋಧನೆ ವಿಷಯವಲ್ಲ, ಪ್ರಾಯೋಗಿಕ ವಿಷಯವಾಗಿದೆ. ಆದ್ದರಿಂದ ಯೋಗ ಶಿಕ್ಷಕರು ಬೋಧನೆ ಜತೆಯಲ್ಲಿ ಪ್ರಾಯೋಗಿಕ ಕಲೆಯನ್ನು ರೂಢಿಸಿಕೊಂಡು ಬೋಧಿಸಿದರೆ ಜನತೆ ದೈಹಿಕ, ಮಾನಸಿಕವಾಗಿ ಸಶಕ್ತರಾಗುವರು. ಇದರಿಂದ ಬಲಿಷ್ಠ ಭಾರತ ನಿರ್ಮಾಣಗೊಳ್ಳುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಂಡರಗಿ ಹಿಮಾಲಯ ಯೋಗ ಕೇಂದ್ರದ ಸಂಚಾಲಕಿ ಮಂಜುಳಾ ಇಟಗಿ ಮಾತನಾಡಿ, ಯೋಗ ಬೋಧನೆ ಪರಿಣಾಮಕಾರಿಯಾಗಿರಲು ಬೋಧಕರು ಯೋಗ ಸಾಧನೆ ಮತ್ತು ಅಧ್ಯಯನ ಶೀಲರಾಗಿರಬೇಕು. ತಮಗಾದ ಅನುಭವ, ಅನಿಸಿಕೆಗಳನ್ನು ಇನ್ನಿತರರಿಗೆ ಪರಿಣಾಮಕಾರಿಯಾಗಿ ತಿಳಿಸಬೇಕು ಎಂದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಮಾತನಾಡಿ, ಯೋಗ ಆಶುಭಾಷಣ ಮತ್ತು ಯೋಗ ಬೋಧನಾ ಕೌಶಲ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸುನಂದಾ ಜ್ಯಾನೋಪಂತರ, ಗೌರಿ ಜಿರಂಕಳಿ ದ್ವಿತೀಯ ಹಾಗೂ ಬಸವರಾಜ ಸಂಗಪ್ಪಶೆಟ್ಟರ ಹಾಗೂ ಯಶವಂತ ಮತ್ತೂರ ತೃತೀಯ ಸ್ಥಾನ ಗಳಿಸಿದ್ದಾರೆ. ವಿಜೇತರಾದ ಸ್ಪರ್ಧಿಗಳಿಗೆ ಪ್ರಮಾಣಪತ್ರ ಹಾಗೂ ಸೂಕ್ತ ಬಹುಮಾನಗಳನ್ನು ಜೂ. 21ರಂದು ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಜರುಗುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ವಿತರಿಸುವರು ಎಂದು ತಿಳಿಸಿದರು.ಉಪಾಧ್ಯಕ್ಷೆ ಶಿವಲೀಲಾ ಅಕ್ಕಿ ಇತರರು ಇದ್ದರು. ನವೀನ ಪಲ್ಲೇದ ವಚನ ಪ್ರಾರ್ಥಿಸಿದರು. ಚೇತನ ಚುಂಚಾ ಸ್ವಾಗತಿಸಿದರು. ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಂ. ಮುಂದಿನಮನಿ ವಂದಿಸಿದರು.