ಸಾರಾಂಶ
ನರಗುಂದ: ಜ.೨೨ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣಗೊಂಡ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದ್ದು, ಅಂದು ನಮ್ಮ ಕ್ಷೇತ್ರದ ಮನೆ ಮನೆಗಳಲ್ಲಿ ದೀಪಾವಳಿಯ ಹಬ್ಬದಂತೆ ಆಚರಣೆ ನಡೆಯಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಜನಸಂಪರ್ಕ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಮೂರು ದಿನಗಳ ಕಾಲ ಮನೆ ಮನೆಗಳಲ್ಲಿ ದೀಪಗಳನ್ನು ಬೆಳಗಬೇಕು. ಪಟ್ಟಣ ಸೇರಿದಂತೆ ಅನೇಕ ದೇವಾಲಯಗಳಿಗೆ ದೀಪಾಲಂಕಾರ ಮಾಡಿಸಲಾಗಿದೆ. ತಾಲೂಕಿನ ಎಲ್ಲ ಮನೆಗಳಿಗೆ ಮಂತ್ರಾಕ್ಷತೆ ಹಾಗೂ ಶ್ರೀ ರಾಮನ ಭಾವಚಿತ್ರಗಳನ್ನು ವಿತರಿಸಲಾಗಿದೆ ಎಂದರು.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ನೆಹರು ಕಾಲದಿಂದ ಕಾಂಗ್ರೆಸ್ ಹಿಂದು ವಿರೋಧಿ ನೀತಿಯನ್ನು ಅಳವಡಿಸಿಕೊಂಡು ಬಂದಿದೆ. ನೆಹರು ಅವರು ಸೋಮನಾಥ ಮಂದಿರದ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ. ಈಗಲೂ ಶ್ರೀ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದರೂ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಗೊಂಡಂತೆ ಎಲ್ಲರೂ ತಿರಸ್ಕಾರ ಮಾಡುತ್ತಿದ್ದಾರೆ. ಹಿಂದು ಸಂಸ್ಕೃತಿಯನ್ನು ವಿರೋಧಿಸುವುದೇ ಕಾಂಗ್ರೆಸ್ ಸಿದ್ಧಾಂತ ಆಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ಕಾರ್ಯಕ್ಕಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ವ್ರತವನ್ನು ಆಚರಿಸುತ್ತಿದ್ದಾರೆ. ಇಂಥವರ ಆಡಳಿತಾವಧಿಯಲ್ಲಿ ನಾನು ಶಾಸಕನಾಗಿದ್ದು ಅತ್ಯಂತ ಖುಷಿ ಮತ್ತು ಹೆಮ್ಮೆ ತಂದಿದೆ. ಕಾಂಗ್ರೆಸ್ಸಿನ ದಿಗ್ವಿಜಯಸಿಂಗ್ ತನ್ನ ಹಳೇ ಚಾಳಿಯನ್ನು ಮುಂದುವರಿಸಿರುವುದನ್ನು ನೋಡಿದರೆ, ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದರು.ಅಯೋಧ್ಯೆಗೂ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಶ್ರೀ ರಾಮನ ಮೂರ್ತಿಗೆ ಕರ್ನಾಟಕದ ಶಿಲೆಯನ್ನು ಬಳಸಲಾಗಿದೆ, ಶಿಲ್ಪಿಯು ಕರ್ನಾಟಕದವರೇ ಆಗಿದ್ದಾರೆ. ಮಂದಿರ ಉದ್ಘಾಟನೆ ಕಾರ್ಯ ಮುಗಿದ ನಂತರದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಸೂಚನೆ ಮೇರೆಗೆ ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ಹೋಗಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿ.ಬಿ. ಐನಾಪೂರ, ಚಂದ್ರು ದಂಡಿನ, ಗುರಪ್ಪ ಆದೆಪ್ಪನವರ, ಮಲ್ಲಪ್ಪ ಮೇಟಿ, ಬಸನಗೌಡ ಪಾಟೀಲ, ಎಸ್.ಎಸ್. ಪಾಟೀಲ, ಶಂಕರ ಪಾಲ್ಟಣಕರ, ಮಂಜು ಮೆಣಸಗಿ ಉಪಸ್ಥಿತರಿದ್ದರು.