ಸಾರಾಂಶ
ಹೊಸಪೇಟೆ: ಕ್ಯಾನ್ಸರ್ ನಿಯಂತ್ರಣಕ್ಕೆ ಲಸಿಕೆ ಇದೆ ಎಂಬುದು ಹಲವರಿಗೆ ಗೊತ್ತಿಲ್ಲ. ಅದನ್ನು ತಿಳಿಯಪಡಿಸುವ ಹಾಗೂ ಸಣ್ಣ ಪ್ರಮಾಣದಲ್ಲಿ ಲಸಿಕೆ ನೀಡುವ ಅಭಿಯಾನ ಇಲ್ಲಿ ಆರಂಭವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಹೇಳಿದರು.ನಗರದ ಫ್ರೀಡಂ ಪಾರ್ಕ್‌ನಲ್ಲಿ ಜನನಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಫ್ರೀಡಂ ಪಾರ್ಕ್ ಯೋಗ ಸ್ನೇಹ ಬಳಗ ಹಾಗೂ ಸ್ಥಳೀಯ ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ಪತಂಜಲಿ ಯೋಗ ಪೀಠದ ಸಂಸ್ಥಾಪನಾ ದಿನದ ಅಂಗವಾಗಿ ಕ್ಯಾನ್ಸರ್ ತಡೆಗಟ್ಟುವ ಹಿನ್ನೆಲೆ ಭಾನುವಾರ ಆಯೋಜಿಸಿದ್ದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಲಸಿಕೆ ಅಭಿಯಾನಗಳಂತಹ ಕಾರ್ಯಕ್ರಮಗಳು ಆರಂಭವಾಗುವುದೇ ಸಣ್ಣ ಪ್ರಮಾಣದಿಂದ. ದೇಶದಲ್ಲಿ ಇಂದು ಗರ್ಭಕಂಠ ಕ್ಯಾನ್ಸರ್ ಸಹಿತ ಹಲವು ಬಗೆಯ ಕ್ಯಾನ್ಸರ್‌ಗಳಿಂದ ಜನ ಸಾಯುತ್ತಿದ್ದು, ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಯಾವುದೇ ಅಡ್ಡ ಪರಿಣಾಮ ಇಲ್ಲದ ಲಸಿಕೆ ಇದೀಗ ಲಭ್ಯವಾಗಿದ್ದು, ಅದನ್ನು ಕಡ್ಡಾಯವಾಗಿ ಬಳಸುವ ನಿಟ್ಟಿನಲ್ಲಿ ಕಡ್ಡಾಯ ಲಸಿಕೆ ಪಟ್ಟಿಯಲ್ಲಿ ಸೇರಿಸುವ ವ್ಯವಸ್ಥೆ ಆಗಬೇಕು ಎಂದರು.
ಕೆಎಫ್‌ಐಎಲ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಮಲಾ ಗುಮಾಸ್ತೆ ಮಾತನಾಡಿ, ಜನಸಂಖ್ಯೆ ಹೆಚ್ಚಿರುವ, ಆದರೆ ತಿಳಿವಳಿಕೆ ಕಡಿಮೆ ಇರುವ ದೇಶ ಭಾರತ, ಇಲ್ಲಿ ಲಸಿಕೆ ಅಭಿಯಾನದಂತಹ ಕಾರ್ಯಗಳಿಗೆ ನಾವೆಲ್ಲ ಕೈಜೋಡಿಸುವ ಅಗತ್ಯ ಇದೆ, ತಿಳಿವಳಿಕೆ ಇದ್ದವರು ತಿಳಿವಳಿಕೆ ಇಲ್ಲದ ಇನ್ನೊಬ್ಬರನ್ನು ಪ್ರಾಯೋಜಿಸುವ ಕೆಲಸ ಮಾಡಿದರೆ ಬಹಳ ದೊಡ್ಡ ಸಂಖ್ಯೆಯಲ್ಲಿ ಇಂತಹ ಲಸಿಕೆ ಅಭಿಯಾನದ ಫಲ ಜನಸಾಮಾನ್ಯರಿಗೆ ಸಿಗುವಂತಾಗಲಿದೆ ಎಂದರು.ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್ ಮಾತನಾಡಿ, ಒಬ್ಬ ಮಹಿಳೆ ಕಲಿತರೆ ಇಡೀ ಸಮಾಜವೇ ಕಲಿತಂತೆ. ಕ್ಯಾನ್ಸರ್ ಕುರಿತ ತಿಳಿವಳಿಕೆ ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಫ್ರೀಡಂ ಪಾರ್ಕ್‌ನಲ್ಲಿ ಯೋಗ ಮತ್ತು ಆರೋಗ್ಯ ಕಾಳಜಿಯ ಸಂಗಮವಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜನನಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಸ್ಥ ಅನಂತ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನಪೂರ್ತಿ ನೆರವಿಗೆ ಬರುವಂತಹ ಇಂತಹ ಲಸಿಕಾ ಕಾರ್ಯಕ್ರಮಗಳ ಕುರಿತು ಮಕ್ಕಳಿಗೆ ತಿಳಿಯುವ ಅಗತ್ಯ ಇದ್ದು, ಡಿಡಿಪಿಐ ಸಹಿತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುವುದಾಗಿ ಹೇಳಿದರು.
ಫ್ರೀಡಂ ಪಾರ್ಕ್ ಯೋಗ ಸ್ನೇಹ ಕೇಂದ್ರದ ಸಂಚಾಲಕ ಶ್ರೀರಾಮ, ಶೈಲಜಾ ಕಳಕಪ್ಪ ಮಾತನಾಡಿದರು.ಡಾ.ಸುಮಂಗಲಾದೇವಿ, ಡಾ.ಶಶಿಕಲಾ ಗುಗ್ರಿ, ಡಾ.ಹೇಮಲತಾ, ಡಾ.ತನುಜಾ, ಡಾ.ಅಂಜನಾ ರಾಜೀವ್ ಅವರ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಯಿತು. 100ಕ್ಕೂ ಅಧಿಕ ಮಂದಿ ಲಸಿಕೆಯ ಮೊದಲ ಡೋಸ್ ಪಡೆದರು.
ಹೊಸಪೇಟೆಯ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಡೆದ ಕ್ಯಾನ್ಸರ್ ತಡೆಗಟ್ಟುವ ಹಿನ್ನೆಲೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಮಾತನಾಡಿದರು.