ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷಕ್ಕಿಂತ ಉತ್ತಮ ಬಾಂಧವ್ಯ ಮೂಡಬೇಕಿದೆ.

ಹೊಸಪೇಟೆ: ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷಕ್ಕಿಂತ ಉತ್ತಮ ಬಾಂಧವ್ಯ ಮೂಡಬೇಕಿದೆ. ಪ್ರಾಣಿಗಳ ಮೇಲೆ ಹಲ್ಲೆ ನಡೆಸುವುದಕ್ಕಿಂತ ಅವುಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್‌. ನಟರಾಜ್‌ ಹೇಳಿದರು.

ಬಳ್ಳಾರಿ, ವಿಜಯನಗರ ಜಿಲ್ಲಾ ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ದರೋಜಿ ಕರಡಿ ಸಂರಕ್ಷಣೆ ಪ್ರದೇಶದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ- ವನ್ಯಜೀವಿಗಳ ಸಂಘರ್ಷ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬಾರದಂತೆ ಕ್ರಮ ವಹಿಸಬೇಕು. ರೈತರ ಬೆಳೆಗಳನ್ನು ಹಾಳು ಮಾಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ರೈತರ ಬೆಳೆಗಳು ಹಾಳು ಮಾಡಿದರೆ, ಪರಿಹಾರ ಒದಗಿಸಬೇಕು. ಕಾಡಂಚಿನ ಭಾಗದಲ್ಲಿ ಜನರಿಗೆ ಪ್ರಾಣಿಗಳ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಬಳ್ಳಾರಿಯ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ. ಬಸವರಾಜ್‌ ಮಾತನಾಡಿ, ವನ್ಯಜೀವಿಗಳು ಬೆಳೆಗಳನ್ನು ಅರಸಿ ಬರುವುದಿಲ್ಲ. ಅವು ತಮಗೆ ಇಷ್ಟವಾದ ಆಹಾರ ಹುಡುಕಿ ಬರುತ್ತವೆ. ರೈತರಿಗೆ ಬೆಳೆ ಪರಿಹಾರವನ್ನು ಸಮೀಕ್ಷೆ ನಡೆಸಿ ನೀಡಲಾಗುತ್ತಿದೆ. ವನ್ಯಜೀವಿಗಳ ಕುರಿತು ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಕರಡಿಯೊಂದನ್ನು ಹಿಡಿದು ಕಾಡಿಗೆ ಬಿಟ್ಟರು, ಆ ಕರಡಿ ಮತ್ತೆ ಅದೇ ಪ್ರದೇಶಕ್ಕೆ ಬಂದಿತ್ತು. ಅದಕ್ಕೆ ಇಷ್ಟವಾದ ಆಹಾರ ಆ ಜಾಗದಲ್ಲಿ ದೊರೆಯುತ್ತದೆ ಎಂದು ಕರಡಿ ಬಂದಿತ್ತು. ಅದನ್ನು ಗುರುತಿಸಲಾಗಿದೆ. ವನ್ಯಜೀವಿಗಳ ಕುರಿತು ಜನರಿಗೂ ಮಾಹಿತಿ ನೀಡಲಾಗುತ್ತಿದೆ ಎಂದರು.

ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ, ವಿಜಯನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ. ರಾಜಶೇಖರ, ವಿಜಯನಗರ ಉಪ ಅರಣ್ಯಸಂರಕ್ಷಣಾಧಿಕಾರಿ ಅನುಪಮ ಎಚ್‌. ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ದರೋಜಿ ಕರಡಿ ಸಂರಕ್ಷಣೆ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಯಿತು.

ದರೋಜಿ ಕರಡಿ ಸಂರಕ್ಷಣೆ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಮಾನವ- ವನ್ಯಜೀವಿಗಳ ಸಂಘರ್ಷ ಕುರಿತ ಕಾರ್ಯಾಗಾರಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಆರ್‌. ನಟರಾಜ್‌ ಚಾಲನೆ ನೀಡಿದರು.