ಸಾರಾಂಶ
ಕಾರ್ಯಕರ್ತರ ಶ್ರಮದಿಂದಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಅಧಿಕಾರ ಬಂದಿದೆಯೆಂದು ಅವರನ್ನು ಕಡೆಗಣಿಸಬೇಡಿ. ಅವರೊಂದಿಗೆ ನಾಯಕರಾದ ನಾವೆಲ್ಲರೂ ಇರಬೇಕು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರ ಕುಂದು-ಕೊರತೆ ಆಲಿಸಿ.
ಕೊಪ್ಪಳ: ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಕಾರ್ಯಕರ್ತರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಕರ್ನಾಟಕ ಲೋಕಸಭಾ ಚುನಾವಣೆ ಉಸ್ತುವಾರಿ ಡಿ.ಬಸವರಾಜ್ ಹೇಳಿದರು.ನಗರದ ಬಿ.ಟಿ. ಪಾಟೀಲ್ ನಗರದಲ್ಲಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣೆ ಹಿನ್ನೆಲೆ ಉಸ್ತುವಾರಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಶ್ರಮದಿಂದಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಅಧಿಕಾರ ಬಂದಿದೆಯೆಂದು ಅವರನ್ನು ಕಡೆಗಣಿಸಬೇಡಿ. ಅವರೊಂದಿಗೆ ನಾಯಕರಾದ ನಾವೆಲ್ಲರೂ ಇರಬೇಕು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರ ಕುಂದು-ಕೊರತೆ ಆಲಿಸಿ ಎಂದರು.ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಚುನಾವಣೆ ಸಂದರ್ಭದಲ್ಲಿ ಮರೆತು ಪಕ್ಷದ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿದ್ದು, ಕಾಂಗ್ರೆಸ್ ಸರ್ಕಾರದ ಮೇಲೆ ಜನರು ಭರವಸೆ ಹೊಂದಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ನಮ್ಮ ಪರವಾದ ವಾತಾವರಣವಿದೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಿ ಎಂದರು.ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಮಾತನಾಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕ ಅಮರೇಗೌಡ ಭಯ್ಯಾಪೂರ, ಮಾಜಿ ಸಂಸದ ಶಿವರಾಮೇಗೌಡ, ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕರಾದ ಬಸವರಾಜ್.ಕೆ.ಹಿಟ್ನಾಳ್, ಹಸನಸಾಬ ದೋಟಿಹಾಳ, ಜಿಪಂ ಮಾಜಿ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ್, ಎಸ್.ಬಿ.ನಾಗರಳ್ಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ ಇತರರಿದ್ದರು.