ಸಾರಾಂಶ
ಹೊಸಪೇಟೆ: ವಿಕಲಚೇತನರಿಗೆ ಸಮಾನ ಹಕ್ಕುಗಳು, ಸೌಕರ್ಯಗಳು ಮತ್ತು ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರು ತಮ್ಮ ಬದುಕಿನಲ್ಲಿ ಸ್ವಾವಲಂಬಿಯಾಗಿಸಲು ಸರ್ಕಾರ ಮಾತ್ರವಲ್ಲದೇ ಸಂಘ-ಸಂಸ್ಥೆಗಳು, ಸಾರ್ವಜನಿಕರು ಅವರೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಕಲಚೇತನರ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿಕಲಚೇತನರಿಗೆ ತಮ್ಮ ಪ್ರತಿಭೆಗಳನ್ನು ಅರಿಯಲು ಹಾಗೂ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬದುಕಿನಲ್ಲಿ ಸಮರ್ಪಕವಾಗಿ ಪಾಲ್ಗೊಳ್ಳಲು ಸೂಕ್ತವಾದ ಪರಿಸರ ಕಲ್ಪಿಸಬೇಕು. ವಿಕಲಚೇತನರನ್ನು ಕೇವಲ ಸಹಾನುಭೂತಿ ದೃಷ್ಟಿಯಿಂದ ನೋಡುವುದನ್ನು ಬಿಟ್ಟು, ಅವರನ್ನು ಸಮಾನಹಕ್ಕುದಾರರು ಮತ್ತು ನಮ್ಮ ಸಮಾಜದ ಬಹುಮುಖ್ಯ ಅಂಗ ಎಂದು ಪರಿಗಣಿಸಬೇಕು. ವಿಕಲಚೇತನರ ಪ್ರತಿಭೆಯನ್ನು ಗುರುತಿಸಿಲು ವರ್ಷಕ್ಕೆ ಒಂದು ಬಾರಿಯಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಗವಿಕಲ ಮಕ್ಕಳಿಗೆ ಹಾಗೂ ವಯಸ್ಕರಿಗೆ ವಿಶೇಷ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ನೀಡುವ ಮೂಲಕ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುತ್ತಿರುವ ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು. ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ್, ದೈಹಿಕ ಶಿಕ್ಷಣ ಮುಖ್ಯಸ್ಥ ಮಂಜುನಾಥ, ಭೂಮಿಕಾ ಟ್ರಸ್ಟ್ ಅಧ್ಯಕ್ಷ ಗಂಗಾಧರ, ಸಾಧ್ಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಆರತಿ ಕೆ.ಟಿ. ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ವಿಕಲಚೇತನರು ಇದ್ದರು.ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಕಲಚೇತನರ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಕಾರ್ಯಕ್ರಮಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಉದ್ಘಾಟಿಸಿದರು.