ಗದಗ ಔದ್ಯೋಗಿಕ ನಗರ ಮಾಡುವ ಸಂಕಲ್ಪ ಮಾಡೋಣ- ಬೊಮ್ಮಾಯಿ

| Published : Aug 18 2025, 12:00 AM IST

ಗದಗ ಔದ್ಯೋಗಿಕ ನಗರ ಮಾಡುವ ಸಂಕಲ್ಪ ಮಾಡೋಣ- ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗಿನ ವಾಣಿಜ್ಯೋದ್ಯಮ ಸಂಘ ಬೆಂಗಳೂರು ಜತೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ. ಗದಗನ್ನು ಔದ್ಯೋಗಿಕ ನಗರವನ್ನಾಗಿ ಮಾಡುವ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ: ಗದಗಿನ ವಾಣಿಜ್ಯೋದ್ಯಮ ಸಂಘ ಬೆಂಗಳೂರು ಜತೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ. ಗದಗನ್ನು ಔದ್ಯೋಗಿಕ ನಗರವನ್ನಾಗಿ ಮಾಡುವ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಏರ್ಪಡಿಸಿದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಗದಗ ಉತ್ಸವದ ರಜತ ಮಹೋತ್ಸವ ಮತ್ತು ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಗದಗಿಗೆ ತನ್ನದೇ ಆದ ವಿಶೇಷ ಸ್ಥಾನ ಇದೆ. ಇತಿಹಾಸ ಪರಂಪರೆ ಇದೆ. ಜಿಯೋಗ್ರಾಫಿಕಲ್ ಲೋಕೇಶನ್ ಇದೆ. ಒಳ್ಳೆಯ ಭವಿಷ್ಯ ಬರೆಯಬೇಕಿದೆ. ಇದು ಸಾಧ್ಯವೋ ಅಸಾಧ್ಯವೋ ಈ ಪಶ್ನೆ ಎಲ್ಲರಿಗೂ ಕಾಡುತ್ತಿದೆ. ಹಲವಾರು ಬಾರಿ ಹಲವಾರು ರೀತಿಯ ಪ್ರಯತ್ನವಾಗಿ ಐದು ದಶಕಗಳ ನಡೆದು ವಾಣಿಜ್ಯೋದ್ಯಮ ಸಂಸ್ಥೆ ಐವತ್ತು ವರ್ಷ ಪೂರೈಸಿದೆ. ಒಂದು ಸಿಂಹಾವಲೋಕನ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿಯಬೇಕಿದೆ. ಒಬ್ಬ ವ್ಯಕ್ತಿಗೆ ಐವತ್ತು ವರ್ಷ ಆಗುವುದು ಮುಖ್ಯವಲ್ಲ. ಒಂದು ಸಂಸ್ಥೆಗೆ ಐವತ್ತು ವರ್ಷ ಆಗುವುದು ಬಹಳ ಮುಖ್ಯ. ಆಗಿನ ವಾಣಿಜ್ಯೋದ್ಯಮಿಗಳು ಕಷ್ಟ ಕಾಲದಲ್ಲಿ ಸಂಸ್ಥೆ ಕಟ್ಟಿದ್ದಾರೆ. ಹಿಂದಿನ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಗೆ ಅಭಿನಂದನೆಗಳು ಎಂದು ಹೇಳಿದರು.

ಒಳ್ಳೆಯ ಭವಿಷ್ಯವಿದೆ: ನಮ್ಮಲ್ಲಿರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ನಮ್ಮ ಆತ್ಮವಿಶ್ವಾಸವನ್ನು ಎರಡು ಪಟ್ಟು ಹೆಚ್ಚಿಗೆ ಮಾಡಿ ಮುಂದುವರೆದರೆ ಖಂಡಿತ ಒಳ್ಳೆಯ ಭವಿಷ್ಯ ಇದೆ. ಬದುಕಿನಲ್ಲಿ ಸ್ಪರ್ಧಿಗಳು ಡ್ರೈವಿಂಗ್ ಫೋರ್ಸ್ ಇದ್ದ ಹಾಗೆ ನಮ್ಮ ಪ್ರತಿಸ್ಪರ್ಧಿ ಹೆಚ್ಚಿಗೆ ವಹಿವಾಟು ಮಾಡುತ್ತಾನೆ ಎಂದರೆ ನಾವು ಇನ್ನೂ ಹೆಚ್ಚು ಉತ್ಪಾದನೆ ಮಾಡಲು ಬಯಸುತ್ತೇವೆ. ಗದಗಿನ ವಾಣಿಜ್ಯೋದ್ಯಮ ಸಂಘ ಬೆಂಗಳೂರಿನ ವಾಣಿಜ್ಯೋದ್ಯಮ ಸಂಘದ ಜೊತೆಗೆ ಸ್ಪರ್ಧೆ ಮಾಡಬೇಕು. ಆ ಗುರಿ ಇಟ್ಟುಕೊಂಡಾಗ ನಮಗೆ ದಾರಿ ಸಿಗುತ್ತದೆ. ಈಗ ಚೆನ್ನಾಗಿ ರೈಲು ಸಂಪರ್ಕ ಆಗಿದೆ. ಗದಗ ವಾಡಿ, ಗದಗ ಯಲವಿಗೆ ಸಂಪರ್ಕ ಆಗುತ್ತಿದೆ. ಮುಂಬೈಗೆ ಹೈಸ್ಟೀಡ್ ರೈಲು ಸಂಪರ್ಕ ಮಾಡುತ್ತಿದ್ದೇವೆ. ಗದಗ-ಯಲವಿಗೆ ಯೋಜನೆಗೆ ಸುಮಾರು 700 ಕೋಟಿ ಮಂಜೂರಾತಿ ಸಿಗುತ್ತಿದೆ. ತುಂಗಭದ್ರಾ ನೀರು ದಡದಲ್ಲಿಯೇ ಹರಿಯುತ್ತಿದೆ. ವರದಾ ಬೇಡ್ತಿ ಜೋಡಣೆಗೆ ಕೇಂದ್ರ ಸರ್ಕಾರ ಶೀಘ್ರ ಒಪ್ಪಿಗೆ ಕೊಡುತ್ತದೆ. ಅದು ಬಂದರೆ ತುಂಗಭದ್ರಾ ನದಿಯಲ್ಲಿ ಬೇಸಿಗೆಯಲಿ ನೀರಿನ ಕೊರತೆ ತಪ್ಪುತ್ತದೆ. ಉದ್ಯಮಶೀಲತೆ ಹೆಚ್ಚಿಸಬೇಕಿದೆ‌ ಎಂದರು.

ಕೌಶಲ್ಯ ಅಗತ್ಯ: ನಮ್ಮ ದೇಶದ ನಾಯಕತ್ವ ದೃಢ ನಿರ್ಧಾರ ಇರುವ ನರೇಂದ್ರ ಮೋದಿಯವರ ಕೈಯಲ್ಲಿ ಇದೆ. ಯಾವುದು ಅಸಾಧ್ಯ ಎನ್ನುತ್ತಾರೊ ಅದನ್ನು ಸಾಧ್ಯ ಮಾಡುತ್ತಾರೆ. ದೇಶ ಯಾವ ಕಡೆ ಹೋಗುತ್ತಿದೆ. ಅಭಿವೃದ್ಧಿ ಯಾವ ಕಡೆಗೆ ಹೋಗುತ್ತಿದೆ. ಅದನ್ನು ನೋಡಿ ನಾವು ಹೋಗಬೇಕು. ಮೊದಲು ಜನಸಂಖ್ಯೆ ದೊಡ್ಡ ಸಮಸ್ಯೆ ಅಂತ ಅಂದುಕೊಂಡಿದ್ದರು. ಜನಸಂಖ್ಯೆಯೇ ಆಸ್ತಿ, ಅವರನ್ನು ಯೋಗ್ಯವಾದ ಕಾಯಕ ಮಾಡಲು ಹಚ್ಚಿದರೆ, ಇಷ್ಟು ದೊಡ್ಡ ಮಾರುಕಟ್ಟೆ ಸದುಪಯೋಗ ಮಾಡಿಕೊಂಡರೆ ಇದಕ್ಕಿಂತ ದೊಡ್ಡ ಅವಕಾಶ ಬೇರೊಂದಿಲ್ಲ. ಅಮೆರಿಕ ತೆರಿಗೆಯಲ್ಲಿ ನಮಗೆ ಕಂಡಿಷನ್ ಹಾಕುತ್ತದೆ. ಅದರಿಂದ ಎರಡು ಮೂರು ಕ್ಷೇತ್ರಕ್ಕೆ ತೊಂದರೆ ಆಗಬಹುದು. ನಮ್ಮ ಆಹಾರ, ಬಟ್ಟೆ, ಆಯಿಲ್, ಕೋಲ್‌ನಲ್ಲಿ ನಮ್ಮನ್ನು ಏನೂ ಮಾಡಲು ಆಗುವುದಿಲ್ಲ. ಅದು ನಮ್ಮ ನೈಸರ್ಗಿಕ ಆಸ್ತಿ. ನಮಗೆ ಕೌಶಲ್ಯದ ಕೊರತೆ ಇದೆ. ಅದಕ್ಕಾಗಿ ಸ್ಕಿಲ್ ಡಿಪಾರ್ಟ್‌ ಮೆಂಟ್ ಕೇಂದ್ರ ಸರ್ಕಾರ ಮಾಡಿದೆ. ಅದನ್ನು ಉಪಯೋಗ ಮಾಡಿಕೊಂಡರೆ ಖಂಡಿತವಾಗಿಯೂ ನಾವು ಯಾವುದೇ ದೇಶಕ್ಕೂ ಸೆಡ್ಡು ಹೊಡೆಯುವ ನಂಬಿಕೆ ನನಗಿದೆ. ನಮ್ಮ ಪ್ರಧಾನಿ 25 ಕೋಟಿ ಜನರನ್ನು ಬಡತನ ಮುಕ್ತ ಮಾಡಿದ್ದಾರೆ. ಐದು ಕೋಟಿ ಜನರಿಗೆ ಮನೆ ಕಟ್ಟಿದ್ದಾರೆ. ಆಹಾರದ ಸುರಕ್ಷತೆ ಇದೆ. ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ. ಬಹಳ ಬದಲಾವಣೆಯಾಗಿದೆ. ಅದರ ಜೊತೆಗೆ ನಾವೂ ಕೂಡ ಬದಲಾಗಬೇಕು. ಯಾವುದೇ ವಸ್ತು ನಿರ್ಮಾಣ ಆಗಬೇಕೆಂದರೆ ನಮ್ಮ ಚಿಂತನೆಯಲ್ಲಿ ಬದಲಾವಣೆಯಾದರೆ ಅದು ಖಂಡಿತ ಆಗುತ್ತದೆ. ಗದಗನಲ್ಲಿ ಆಹಾರ ಸಂಸ್ಕರಣೆ, ಜವಳಿ ಉದ್ಯಮಕ್ಕೆ ಹೆಚ್ಚು ಅವಕಾಶ ಇದೆ. ನಾನು ಜವಳಿ, ಕೌಶಲ್ಯ ಮತ್ತು ಕಾರ್ಮಿಕ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಇದ್ದೇನೆ. ನಾನು ಗದಗಿಗೆ ಏನು ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಜವಳಿ ಮತ್ತು ಕೌಶಲ್ಯ ತರಬೇತಿಗೆ ಏನು ಮಾಡಬೇಕೆಂದು ಖಂಡಿತ ಮಾಡುತ್ತೇನೆ ಎಂದು ಹೇಳಿದರು.

ಉದ್ಯಮ ಸ್ಥಾಪನೆ ಕಷ್ಟ: ಗದಗನಲ್ಲಿ ಎಂಜಿನಿಯರಿಂಗ್ ಕಾಲೇಜ್ ಇದೆ. ಎಂಟರ್‌ಪಿನರ್ ಶಿಪ್ ಇನ್ ಸಾರ್ಟ್ ಅಪ್ ಆರಂಭಿಸಬೇಕೆಂಬ ಬಯಕೆ ಇದೆ. ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಅದರ ಜವಾಬ್ದಾರಿಯನ್ನು ಚೇಂಬ‌ರ್ ಆಫ್ ಕಾಮರ್ಸ್ ತೆಗೆದುಕೊಳ್ಳಬೇಕು. ಚೈನಾ ಕಮ್ಯುನಿಷ್ಟ ದೇಶ ಆದರೆ ಅಲ್ಲಿ ಪ್ರತಿಯೊಂದು ನೀತಿಯನ್ನು ಜನರನ್ನು ಕೇಳಿ ಮಾಡುತ್ತಾರೆ. ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ಆದರೂ ನಾವು ಜನರ ಅಭಿಪ್ರಾಯ ಕೇಳುವುದಿಲ್ಲ. ಚೇಂಬರ್ ಆಫ್ ಕಾಮರ್ಸ್ ಚೈನಾದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಯಾರನ್ನೂ ಕೇಳುವುದಿಲ್ಲ. ಕರ್ನಾಟಕದಲ್ಲಿ ಉದ್ಯಮ ಮಾಡಲು ಕಷ್ಟವಾಗಲು ಸರ್ಕಾರ ಹಾಗೂ ಭೂಮಾಫಿಯಾ ಕಾರಣವಾಗಿದೆ. ಒಂದು ಉದ್ಯಮ ಆರಂಭಿಸಲು ಮುಂದಾದರೆ ಭೂಮಿಯ ಬೆಲೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರು ಉದ್ಯಮ ಸ್ಥಾಪಿಸುವುದು ಕಷ್ಟವಾಗಿದೆ ಎಂದು ಹೇಳಿದರು.

ಸಾಧಕರಿಗೆ ಪಶಸ್ತಿ ಕೊಟ್ಟಿರುವುದು ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡುವಂತೆ ನೀಡಿದ್ದಾರೆ. ಆ ವಿಶ್ವಾಸ ಇದೆ. ನಾನು ಎಂಜಿನಿಯರಿಂಗ್ ಮುಗಿಸಿ ಪೂನಾಕ್ಕೆ ಕೆಲಸಕ್ಕೆ ಹೋಗಿದ್ದೆ ಅಲ್ಲಿಂದ ಬಿಟ್ಟು ಬಂದು ಸ್ವಂತ ಉದ್ಯಮ ಸ್ಥಾಪಿಸಿ ಏಳು ಉದ್ಯಮ ಯಶಸ್ವಿಯಾಗಿ ನಡೆಸುತ್ತಿದ್ದೇನೆ. ನನಗೆ ರಾಜಕೀಯಕ್ಕಿಂತ ಉದ್ಯಮಿಯಾಗಿ ಹೆಚ್ಚು ಖುಷಿಯಾಗಿದೆ. ನಮ್ಮ ಉದ್ಯಮ ಮದುವೆಯಾದ ಹೆಂಡತಿ ಇದ್ದ ಹಾಗೆ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ. ಗದಗನ್ನು ಔದ್ಯೋಗಿಕ ನಗರವನ್ನಾಗಿ ಮಾಡುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ ಡಂಬಳ- ಗದಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.