ಪ್ರಜಾಪ್ರಭುತ್ವದ ಮೌಲ್ಯ ಗೌರವಿಸೋಣ: ಸಂಸದ ತುಕಾರಾಂ

| Published : Sep 16 2024, 01:59 AM IST

ಪ್ರಜಾಪ್ರಭುತ್ವದ ಮೌಲ್ಯ ಗೌರವಿಸೋಣ: ಸಂಸದ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕಿದೆ.

ಸಂಡೂರು: ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಮತ್ತು ಸದೃಢ ಪ್ರಜಾಪ್ರಭುತ್ವ ರಾಷ್ಟ್ರ. ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯವ ಹಾಗೂ ಗೌರವಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಶ್ರಮಿಸಬೇಕು ಎಂದು ಸಂಸದ ಈ. ತುಕಾರಾಂ ಅಭಿಪ್ರಾಯಪಟ್ಟರು.

ತಾಲೂಕಿನ ಬನ್ನಿಹಟ್ಟಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸಂಖೆಯ ಆಧಾರದ ಮೇಲೆ ಬಜೆಟ್ ನೀಡಿ, ಸರ್ವರ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ೫ ಭಾಗ್ಯಗಳಿಂದ ಬಡಜನತೆಗೆ ತುಂಬ ಅನುಕೂಲವಾಗಿದೆ ಎಂದರು.

ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು: ಈ ದಿನದಂದು ರಾಜ್ಯದಾದ್ಯಂತ ೮೦ ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೊನಾ ಸಂದರ್ಭದಲ್ಲಿ ದೇಶದಾದ್ಯಂತ ಆಕ್ಸಿಜನ್ ಸಿಲೆಂಡರ್‌ಗಾಗಿ ಜನತೆ ಪರದಾಡಿದ್ದನ್ನು ಕಂಡಿದ್ದೇವೆ. ಸ್ವಾಭಾವಿಕವಾಗಿ ಆಕ್ಸಿಜನ್ ಉತ್ಪಾದಿಸಿ ನಮಗೆ ನೀಡುವ ಗಿಡಮರಗಳನ್ನು ನಾವು ಹೆಚ್ಚು ಬೆಳೆಸುವ ಅಗತ್ಯವಿದೆ. ತಾಲೂಕಿನ ಅರಣ್ಯ ಸಂರಕ್ಷಿಸಿ, ಬೆಳೆಸಿದರೆ ಉತ್ತರ ಕರ್ನಾಟಕಕ್ಕೆ ಈ ಪ್ರದೇಶ ಆಕ್ಸಿಜನ್ ನೀಡಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ಬೀದರ್‌ದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ತಾಲೂಕಿನ ಕುರೆಕುಪ್ಪದಿಂದ ಸಂತೆಗುಡ್ಡ ಮೇಲಿನ ಕಣಿವೆದವರೆಗೆ (ಚಿತ್ರದುರ್ಗದ ಗಡಿಭಾಗ) ೪೫.೯ ಕಿ.ಮೀ. ಮಾನವ ಸರಪಳಿ ನಿರ್ಮಿಸಲಾಗಿದೆ. ಇದರಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಇಲಾಖೆಗಳವರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿ ಒಟ್ಟು ೩೨ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಮಾನವ ಸರಪಳಿ ನಿರ್ಮಿಸುವ ಮೂಲಕ ಜನತೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಮಹತ್ವದ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.

ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಐಜಿಪಿ ಲೋಕೇಶ್ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ, ಪ್ರಮಾಣ ವಚನವನ್ನು ಸ್ವೀಕರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ ಸಂಸ್ಥೆಗಳವರು ತ್ರಿವರ್ಣ ಧ್ವಜಗಳನ್ನು ಹಿಡಿದು ೪೫.೯ ಕಿ.ಮೀ ಮಾನವ ಸರಪಳಿ ನಿರ್ಮಿಸಿದ್ದು ಆಕರ್ಷಕವಾಗಿತ್ತು. ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ನೀರು ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮಹಮ್ಮದ್ ಜುಬೇರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ಎಚ್.ಷಡಾಕ್ಷರಯ್ಯ, ಬಿಇಒ ಡಾ.ಐ.ಆರ್. ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಂಡೂರು ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಗ್ರಾಪಂ ಜನಪ್ರತಿನಿಧಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.