ದೇಶಿ ಕ್ರೀಡೆ ಉಳಿಸಿ ಬೆಳೆಸಲಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ

| Published : Jan 23 2024, 01:50 AM IST

ದೇಶಿ ಕ್ರೀಡೆ ಉಳಿಸಿ ಬೆಳೆಸಲಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರ ಕ್ರೀಡಾಕೂಟ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಆಟದಲ್ಲಿ ಸೋಲು-ಗೆಲವು ಸರ್ವೇ ಸಾಮಾನ್ಯ. ಸೋತವರು ಮುಂದೆ ಒಂದು ದಿನ ಗೆಲ್ಲಲೇಬೇಕು ಎಂದು ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು..

ನವಲಗುಂದ: ಈಗಿನ ದಿನಮಾನಗಳಲ್ಲಿ ಹಳ್ಳಿಯ ಸೊಗಡುಗಳಾದಂತಹ ಕಬಡ್ಡಿ, ಖೋಖೋ, ಚಿನಿಪಣಿ ಸೇರಿದಂತೆ ಅನೇಕ ಕ್ರೀಡೆಗಳು ಮಾಸಿ ಹೋಗುತ್ತಿವೆ. ನಮ್ಮ ದೇಸಿಯ ಆಟಗಳು ಜೀವಂತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಸಂಸದ ಪ್ರಹ್ಲಾದ ಜೋಶಿ ಅವರು ದೇಸಿ ಆಟಗಳ ಮುಖಾಂತರ ಹಳ್ಳಿಯ ಪ್ರತಿಭೆಗಳನ್ನು ಹೊರ ಹಾಕುತ್ತಿರುವುದು ಸಂತಸ ತಂದಿದೆ ಎಂದು ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶಂಕರ ಕಾಲೇಜು ಮೈದಾನದಲ್ಲಿ ಸಂಸದರ ಕ್ರೀಡಾಕೂಟ ಕಬಡ್ಡಿ ಟ್ರೋಫಿಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಪಂದ್ಯಾವಳಿ ಸಮಾರೋಪದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಆಟದಲ್ಲಿ ಸೋಲು-ಗೆಲವು ಸರ್ವೇ ಸಾಮಾನ್ಯ. ಸೋತವರು ಮುಂದೆ ಒಂದು ದಿನ ಗೆಲ್ಲಲೇಬೇಕು. ಯಾರು ನಿರಾಸೆಯಾಗದೆ ಎಲ್ಲವೂ ಒಂದು ರೀತಿಯ ಅನುಭವ ತಂದುಕೊಡುತ್ತದೆ. ಆಟಗಾರರು ಮತ್ತೆ ಇಂತಹ ಅವಕಾಶಗಳು ಬಂದಾಗ ಅವುಗಳ ಸದುಪಯೋಗ ಪಡೆದುಕೊಂಡು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದರು.

ನಂತರ ಮಾತನಾಡಿದ ಮಾಜಿ ಸಚಿವ ಸಿ.ಸಿ. ಪಾಟೀಲ, ಈ ದೇಸಿ ಆಟಕ್ಕೆ ಪ್ರೊ. ಕಬಡ್ಡಿ ಬಂದನಂತರ ಹೆಚ್ಚಿನ ಪ್ರೋತ್ಸಾಹ ಸಿಕ್ಕು ಎಲ್ಲ ಕಡೆ ಪಂದ್ಯಾವಳಿಗಳು ನಡೆಯುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿ ಆದರ್ಶ ಸಚಿವರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸ್ಥಳೀಯ ಆಟಗಾರರು ಮತ್ತು ಕ್ರೀಡಾಪಟುಗಳಿಗೆ ಅವಕಾಶ ಸಿಗಬೇಕು. ಅವರಲ್ಲಿರುವ ಪ್ರತಿಭೆಗಳು ಹೊರಹೊಮ್ಮಿ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿಯೂ ಒಳ್ಳೆಯ ಪ್ರತಿಭೆಗಳಿಗೆ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಿದ್ದಾರೆ. ಮೂರು ದಿನಗಳ ಕಾಲ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಇಂತಹ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕೇಂದ್ರ ಸಚಿವರಿಗೆ ಅಭಿನಂದನೆಗಳು ಎಂದರು.

ಸಂಸದರ ಕಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಕುಮಾರವ್ಯಾಸ ತಂಡ 20 ಅಂಕ ಗಳಿಸಿ ಪ್ರಥಮ ಸ್ಥಾನ ಟ್ರೋಫಿ ತನ್ನದಾಗಿಸಿಕೊಂಡಿದೆ. ಎದುರಾಳಿ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ತಂಡ 7 ಅಂಕಗಳಿಂದ ಸೋತು ದ್ವಿತೀಯ ಸ್ಥಾನ ಪಡೆದಿದೆ.

ಮೊರಬ ಗ್ರಾಮದ ಜೈ ಹನುಮಾನ ತಂಡ ತೃತೀಯ ಸ್ಥಾನ, ಅಣ್ಣಿಗೇರಿ ತಾಲೂಕಿನ ಶ್ರೀ ಅಮೃತೇಶ್ವರ ಸ್ಪೋರ್ಟ್ಸ್ ಕ್ಲಬ್ ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಕೋಳಿವಾಡ ಗ್ರಾಮದ ಆಸೀಫ್ ಅತ್ಯುತ್ತಮ ದಾಳಿಗಾರ ಹಾಗೂ ಬಸಾಪೂರ ಗ್ರಾಮದ ಅತ್ಯುತ್ತಮ ಆಲರೌಂಡರ್ ಶಶಿ ಮತ್ತು ಮೊರಬ ಗ್ರಾಮದ ಮಹಮ್ಮದ ಅತ್ಯುತ್ತಮ ಕ್ಯಾಚರ್ ಆಗಿ ಪಂದ್ಯಾವಳಿಯಲ್ಲಿ ಹೊರಹೊಮ್ಮಿದ್ದಾರೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಈಗಾಗಲೇ ಅಣ್ಣಿಗೇರಿ ತಾಲೂಕಿನಲ್ಲಿ ಒಳಕ್ರೀಡಾಂಗಣ ಮತ್ತು ಈಜುಕೊಳಕ್ಕೆ ₹5 ಕೋಟಿ ಮಂಜೂರು ಮಾಡಲಾಗಿದ್ದು, ಸದ್ಯದಲ್ಲಿಯೆ ಕೆಲ ದಿನಗಳಲ್ಲಿ ಅದರ ಉದ್ಘಾಟನೆ ನಡೆಯಲಿದೆ. ಅದೇ ರೀತಿ ನವಲಗುಂದದಲ್ಲಿಯೂ ಕ್ರೀಡಾಂಗಣ ಮತ್ತು ಈಜುಕೊಳಕ್ಕೆ ಜಾಗೆ ನೀಡಿದರೆ ₹5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸುತ್ತೇವೆ. ಆದರೆ, ರಾಜ್ಯ ಸರಕಾರ ಜಾಗೆಯನ್ನು ನೀಡಲು ಮುಂದಾಗಬೇಕು ಎಂದರು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಮಾಜಿ ಸಚಿವ ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಹಾಗೂ ಅರವಿಂದ ಬೆಲ್ಲದ, ಮಾಜಿ ಸಚಿವ ಕೆ.ಎನ್. ಗಡ್ಡಿ, ರಾಯನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಬಸವರಾಜ ಕುಂದಗೋಳಮಠ, ಶರಣಪ್ಪಗೌಡ ದಾನಪ್ಪಗೌಡ್ರ, ದೇವರಾಜ ದಾಡಿಭಾವಿ, ಷಣ್ಮುಖ ಗುರಿಕಾರ, ಮಾಂತೇಶ ಕಲಾಲ, ಶ್ರೀಶೈಲ ಮೂಲಿಮನಿ, ಸಂತೋಷ ಪಾಟೀಲ, ಪವನ ಪಾಟೀಲ, ಮಲ್ಲಿಕಾರ್ಜುನ ಸಂಕನಗೌಡರ ಪ್ರಭುಗೌಡ ಇಬ್ರಾಹಿಂಪುರ ಹಾಗೂ ಜೋಶಿ ಅಭಿಮಾನಿ ಬಳಗ ಹಾಗೂ ಕಬಡ್ಡಿ ಅಸೋಸಿಯೆಷನ್ ಅಮೆಚೋ ಸೇರಿದಂತೆ ಸಾವಿರಾರು ವೀಕ್ಷಕರು ಭಾಗಿಯಾಗಿದ್ದರು.