ಸಾಮಾಜಿಕ ಹಿತಕ್ಕಾಗಿ ವಚನಗಳ ಪಾಲನೆ, ಪೋಷಣೆಗೆ ಮುಂದಾಗೋಣ-ಓಂಕಾರಣ್ಣನವರ

| Published : May 17 2024, 12:36 AM IST

ಸಾಮಾಜಿಕ ಹಿತಕ್ಕಾಗಿ ವಚನಗಳ ಪಾಲನೆ, ಪೋಷಣೆಗೆ ಮುಂದಾಗೋಣ-ಓಂಕಾರಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಹಿತಕ್ಕಾಗಿ ವಚನಗಳ ಪಾಲನೆ ಪೋಷಣೆಗೆ ಮುಂದಾಗೋಣ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾವೇರಿ ನಗರ ಘಟಕದ ಅಧ್ಯಕ್ಷ ಜಿ.ಎಂ.ಓಂಕಾರಣ್ಣನವರ ಹೇಳಿದರು.

ಹಾವೇರಿ: ಹಾವೇರಿ ಜಿಲ್ಲೆಯು ಶರಣ ಸಂಸ್ಕೃತಿಯ ತವರು. ಇಲ್ಲಿನ ಮಠ ಮಾನ್ಯಗಳು, ಮಂದಿರಗಳು ಸದಾ ಸಾಂಸ್ಕೃತಿಕ ಹಿತಕ್ಕಾಗಿ ಶ್ರಮಿಸುತ್ತಿವೆ. ಈ ನಾಡು ಸತ್ಯ ಶರಣರ ನಾಡು. ಇಲ್ಲಿ ಶರಣರ ಚಿಂತನೆಗಳನ್ನು ಮನೆ ಮನಸ್ಸುಗಳಿಗೆ ತಲುಪಿಸಲು ಮನೆಯಲ್ಲಿ ಮಹಾಮನೆ ಹಾಗೂ ಶಾಲಾ ಕಾಲೇಜುಗಳಲ್ಲಿ ವಚನ ಚಿಂತನಕ್ಕೆ ಮುಂದಾಗಿದ್ದೇವೆ. ಸಾಮಾಜಿಕ ಹಿತಕ್ಕಾಗಿ ವಚನಗಳ ಪಾಲನೆ ಪೋಷಣೆಗೆ ಮುಂದಾಗೋಣ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾವೇರಿ ನಗರ ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಹೇಳಿದರು.

ನಗರದ ಅನಿತಾ ಉಪಾಲಿ ಅವರ ಮನೆಯಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾವೇರಿ ಘಟಕ ಆಯೋಜಿಸಿದ್ದ ಹಿರಿಯ ಲೇಖಕ ರಂಜಾನ್ ದರ್ಗಾ ಅವರ ಜಾತಿ ವ್ಯವಸ್ಥೆಗೆ ಸವಾಲಾದ ಶರಣರು ಕೃತಿ ಸಂವಾದ ಹಾಗೂ ಮನೆಯಲ್ಲಿ ಮಹಾಮನೆ, ವಚನ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ಶರಣರ ಚಿಂತನೆಗಳ ಜಾಗೃತಿಗಾಗಿ ಮತ್ತೆ ವಚನ ಚಳವಳಿಯ ಪುನರುತ್ಥಾನದ ಅಗತ್ಯವಿದ್ದು ಸತ್ಯ ಸರಳವಾಗಿರುವ ವಚನಗಳನ್ನು ಮನೆ ಮನಸ್ಸು ಮಕ್ಕಳಿಗೆ ತಲುಪಿಸುವ ಸಂಕಲ್ಪ ಈಗ ಎಲ್ಲರದ್ದಾಗಬೇಕು. ತಲೆತಲಾಂತರದಿಂದ ಗಟ್ಟಿಯಾಗಿದ್ದ ಜಾತಿ ವ್ಯವಸ್ಥೆ ನಿರ್ಮೂಲನೆ, ಮಹಿಳಾ ಸಮಾನತೆಗೆ ಮೊದಲ ಕ್ರಾಂತಿಕಾರಕ ಹೆಜ್ಜೆಗಳನ್ನಿರಿಸಿದ ವಚನಕಾರರು ಎಂಥ ಸಂಕಷ್ಟದಲ್ಲಿಯೂ ಸಮಾಜದ ಹಿತವನ್ನು ಕಾಯಲು ಮುಂದಾದರು. ಇಂದಿನ ಸಾಮಾಜಿಕ ವೈರುಧ್ಯಗಳ ನಡುವೆ ವಚನಗಳು ಸತ್ಸಮಾಜ ನಿರ್ಮಾಣಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಬಲ್ಲವು. ಇಂತಹ ಶರಣರ ಚಿಂತನೆ ಊರು ಕೇರಿ ಮನೆಯಂಗಣದಲ್ಲಿ ನಿತ್ಯ ನಿರಂತರ ಚರ್ಚೆಗೆ ಅವಕಾಶವಾಗಬೇಕು ಎಂದರು.ಯುವ ಸಂಘಟಕ ಎಂ.ಬಿ. ಸತೀಶ ಸಂವಾದದಲ್ಲಿ ಮಾತನಾಡಿ, ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯನ್ನು ಅಮೂಲಾಗ್ರ ಕಿತ್ತೊಗೆಯುವ ಶರಣರ ಸಾಹಸಕ್ಕೆ ದೊಡ್ಡ ಕ್ರಾಂತಿಯೇ ಆಗಿದೆ. ದರ್ಪ ದಮನಕಾರಿ ಚಿಂತನೆಗಳಿಂದ ಎಲ್ಲರೂ ಹೊರಬರಬೇಕಾಗಿದೆ. ಜಾತಿ ಹೆಸರಿನ ನರಕ ಬೇಡ, ಗೌರವದ ಸಮಾನತೆಯ ಬದುಕು ಮಾನವನದ್ದಾಗಬೇಕಾಗಿದೆ. ಕಾಯಕ ದಾಸೋಹ ಸಿದ್ಧಾಂತಕ್ಕೆ ಮಹತ್ವ ದೊರೆಯಬೇಕು. ಡಂಬಾಚಾರಕ್ಕೆ ಸವಾಲಾಗಿ, ಶೋಷಿತರ ಧ್ವನಿಯಾಗಲು ಬಸವ ದೀಕ್ಷೆ ಬೇಕಾಗಿದೆ ಎಂದರು.ಆಶಯ ನುಡಿ ನುಡಿದ ಬಸವರಾಜ ಕೋರಿ, ಮನಸ್ಸು ಬದಲಾದಾಗ ಮಾತ್ರ ನಮ್ಮ ವಿವೇಕ ಬದಲಾಗಲು ಸಾಧ್ಯ. ಪ್ರಾಣಿಗಳಿಗಿಂತ ಭಿನ್ನವಾದ ಮನುಷ್ಯ ಕುಲ ಅಂಧ ಅತ್ಯಾಚಾರದಲ್ಲಿ ಮುಂದಿದೆ. ಇದು ಎಲ್ಲ ಕಾಲದ ದುಸ್ಥಿತಿ ಎಂದಾದರೂ ಕೂಡ, ಬದಲಾದ ತಾಂತ್ರಿಕ ಅತ್ಯುನ್ನತಿಯ ಈ ಕಾಲದಲ್ಲಾದರೂ ಸಮಾನತೆ ಬೇಕು ಎಂಬ ಕಿಂಚಿತ್ ಅರಿವು ನಮ್ಮನ್ನು ಆವರಿಸಬೇಕಾಗಿದೆ ಎಂದರು. ಹಾವೇರಿ ಶಸಾಪದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಬಸವಾದಿ ಶಿವಶರಣರ ಸಮಾಜಮುಖಿ, ಸಾಹಿತ್ಯಿಕ, ಸಾಂಸ್ಕೃತಿಕ ಸೇವೆಯ ಬಗ್ಗೆ ಮಾತನಾಡಿ ಇಂದಿನ ಮಕ್ಕಳ ಮನಸ್ಸಿಗೆ ಶರಣರ ವಚನ ಸಾಹಿತ್ಯವನ್ನು ನೀಡಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ ಎಂದರು. ಜಗದೀಶ ಹರ್ತಿಕೋಟೆ ವಚನಗಳ ವಿಶ್ಲೇಷಣೆ ಮಾಡಿದರು.ಸಾವಿತ್ರಾ ಬಾರ್ಕಿ ಪ್ರಾರ್ಥಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಶಸಾಪ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ ವಂದಿಸಿದರು. ಕೆ.ಆರ್.ಹಿರೇಮಠ, ಆರಾಧ್ಯ ಉಪಾಲಿ, ಮುರಿಗೆಪ್ಪ ಕಡೆಕೊಪ್ಪ, ವಚನಗಳನ್ನು ಹಾಡಿದರು. ಅಶೋಕ ಉಪಾಲಿ, ಕಾರ್ಯದರ್ಶಿಎಸ್.ಆರ್.ಹಿರೇಮಠ, ಜಿಲ್ಲಾ ಕದಳಿ ಅಧ್ಯಕ್ಷೆ ದ್ರಾಕ್ಷಾಯಿಣಿ ಗಾಣಿಗೇರ, ಗೌರವಾಧ್ಯಕ್ಷೆ ಲಲಿತಾ ಹೊರಡಿ, ಶಿವಬಸಪ್ಪ ಮುದ್ದಿ, ನಾಗೇಂದ್ರಪ್ಪ ಮಂಡಕ್ಕಿ, ಶಿವಾÀನಂದ ಹೊಸಮನಿ ಇತರರು ಇದ್ದರು.೧೬ಎಚ್‌ವಿಆರ್೨ಹಾವೇರಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾವೇರಿ ಘಟಕದಿಂದ ಸಂವಾದ ಹಾಗೂ ಮನೆಯಲ್ಲಿ ಮಹಾಮನೆ, ವಚನ ಸಂಗೀತ ಕಾರ್ಯಕ್ರಮಮ ನಡೆಯಿತು.