ಸಾರಾಂಶ
ಶಿವಾಜಿ ಮಹಾರಾಜರಲ್ಲಿ ರಾಷ್ಟ್ರ ಪ್ರೇಮ, ರಾಷ್ಟ ಭಕ್ತಿ ಅಗಾಧವಾಗಿತ್ತು. ಅವರ ಗೋರಿಲ್ಲಾ ಯುದ್ಧ ತಂತ್ರದ ಮೂಲಕ ಶತ್ರುಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಅವರು ಭಾರತದ ಭದ್ರ ಬುನಾದಿ ಹಾಕಿದ ಶ್ರೇಷ್ಠ ನಾಯಕರಾಗಿದ್ದು, ದೇಶದ ಉಳಿವಿಗಾಗಿ ಹೋರಾಟ ಮಾಡಿದ್ದರು.
ಕೊಪ್ಪಳ:
ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯದ ಜತೆಗೆ ದಾರ್ಶನಿಕ ನಾಯಕರಾಗಿದ್ದರು. ಹಾಗಾಗಿ ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಹೇಳಿದರು.ಅವರು ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ದೇಶಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಎಲ್ಲ ಸಮಾಜದ ಜನರ ಏಳ್ಗೆ ಬಯಸಿದ್ದರು. ವಿದೇಶಿ ಆಕ್ರಮಣಕಾರರನ್ನು ಧೈರ್ಯ ಮತ್ತು ಸಾಹಸದ ಮೂಲಕ ಎದುರಿಸಿದ್ದ ಒಬ್ಬ ಶ್ರೇಷ್ಠ ನಾಯಕನಾಗಿದ್ದರು. ಭಾರತದಲ್ಲಿ ಹಲವಾರು ಧರ್ಮ, ಜಾತಿ. ಜನಾಂಗಗಳಿದ್ದರು ನಾವೆಲ್ಲರೂ ಪರಸ್ಪರ ಸಹೋದರತ್ವದಿಂದ ಬಾಳುತ್ತಿದ್ದೇವೆ ಎಂದು ಹೇಳಿದರು.ತಹಸೀಲ್ದಾರ್ ವಿಠಲ್ ಚೌಗಲಾ ಮಾತನಾಡಿ, ಶಿವಾಜಿ ಮಹಾರಾಜರಲ್ಲಿ ರಾಷ್ಟ್ರ ಪ್ರೇಮ, ರಾಷ್ಟ ಭಕ್ತಿ ಅಗಾಧವಾಗಿತ್ತು. ಅವರ ಗೋರಿಲ್ಲಾ ಯುದ್ಧ ತಂತ್ರದ ಮೂಲಕ ಶತ್ರುಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಅವರು ಭಾರತದ ಭದ್ರ ಬುನಾದಿ ಹಾಕಿದ ಶ್ರೇಷ್ಠ ನಾಯಕರಾಗಿದ್ದು, ದೇಶದ ಉಳಿವಿಗಾಗಿ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಹಿರಿಯ ವಕೀಲ ಸುಧೀರ ಘೋರ್ಪಡೆ ಮಾತನಾಡಿ, ದೇಶ ಹಾಗೂ ಧರ್ಮಕ್ಕೆ ಹಾನಿಯಾದಾಗ ಅನೇಕ ಮಹಾನ ಪುರುಷರು. ದಾರ್ಶನಿಕರು. ಮೇಧಾವಿಗಳು ಹುಟ್ಟಿ ಬರುತ್ತಾರೆ ಎಂದು ಶ್ರೀಕೃಷ್ಣ ಹೇಳುವಂತೆ ಶಿವಾಜಿ ಮಹಾರಾಜರು ಜನಿಸಿದರು ಎಂದರು. ಶಿವಾಜಿಗೆ ಬಾಲ್ಯದಲ್ಲಿ ತಾಯಿ ರಾಮಾಯಣ ಹಾಗೂ ಮಹಾಭಾರತ ಹೇಳುತ್ತಿದ್ದರು. ಹಾಗಾಗಿ ಶಿವಾಜಿಗೆ 14 ವರ್ಷದಲ್ಲಿ ಸಾಮ್ರಾಜ್ಯ ಹೇಗೆ ಕಟ್ಟಬೇಕು ಎಂಬ ಆಲೋಚನೆ ಮೂಡಿತು. ಹಲವಾರು ಯುವಕರನ್ನು ಸಂಘಟಿಸಿ ಹಿಂದ್ ವಿ ಸ್ವರಾಜ್ಯ ಸ್ಥಾಪಿಸಿದರು ಎಂದ ಅವರು, ಶಿವಾಜಿ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರ ಆದರ್ಶಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.ಶಿವಾಜಿ ಮಹಾರಾಜರ ವೇಷಭೂಷಣ ಸ್ಪರ್ಧೆ ಮಕ್ಕಳಿಂದ ನಡೆಯಿತು. ಇದರಲ್ಲಿ ಪ್ರಥಮ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಫಕೀರಪ್ಪ ಆರೇರ, ಕೃಷ್ಣಾಜಿ ಬೋಸಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಕೊಟ್ರೇಶ ಮರಬನಳ್ಳಿ, ಶರಬೋಜಿ ಗಾಯಕವಾಡ, ರಾಘವೇಂದ್ರ ಹುಯಿಲಗೋಳ, ರಾಜು ಬಾಕಳೆ, ಸರೋಜಾ ಬಾಕಳೆ, ಸಾವಿತ್ರಿ ಹಾಗೂ ಮರಾಠ ಸಮಾಜದ ಮುಖಂಡರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.