ಗುಂದ ವನ್ಯಜೀವಿ ವಿಭಾಗದ ಉಳವಿಯಲ್ಲಿ ಅರಣ್ಯ ಇಲಾಖೆಯ ನೂತನ ವಸತಿ ಗೃಹಗಳ ಉದ್ಘಾಟನೆ ಮತ್ತು ವನ ಮಹೋತ್ಸವ ಕಾರ್ಯಕ್ರಮ ನಡೆಯಿತು.
ವಸತಿಗೃಹ ಉದ್ಘಾಟನೆ, ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಕನ್ನಡಪ್ರಭ ವಾರ್ತೆ ಜೋಯಿಡಾಗುಂದ ವನ್ಯಜೀವಿ ವಿಭಾಗದ ಉಳವಿಯಲ್ಲಿ ಅರಣ್ಯ ಇಲಾಖೆಯ ನೂತನ ವಸತಿ ಗೃಹಗಳ ಉದ್ಘಾಟನೆ ಮತ್ತು ವನ ಮಹೋತ್ಸವ ಕಾರ್ಯಕ್ರಮ ನಡೆಯಿತು.ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಇಓ ರಾಧಾದೇವಿ ವಿ. ಕಾರ್ಯಕ್ರಮ ಉದ್ಘಾಟಿಸಿ ವನ ಮಹೋತ್ಸವದಲ್ಲಿ ತಮ್ಮ ತಾಯಿ ಚಂದ್ರಕಾಂತಮ್ಮ ಅವರ ಸವಿನೆನಪಿಗಾಗಿ ಒಂದು ಸಸಿ ನೆಡುವ ಮೂಲಕ ಮಾಕೆ ನಾಮ್ ಏಕ ಪೇಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಪರಿಸರ ಚೆನ್ನಾಗಿರಬೇಕು ಹಸಿರು ಹೊದಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಜನರು ತಮ್ಮ ತಮ್ಮ ತಾಯಂದಿರ ಹೆಸರಿನಲ್ಲಿ ಒಂದು ಗಿಡ ನೆಟ್ಟು ಸಂರಕ್ಷಿಸಿದರೆ, ಮುಂದಿನ ಪೀಳಿಗೆಗೆ ಅದು ಆಸರೆಯಾಗುತ್ತದೆ. ಸ್ಥಳೀಯರ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮೂಲಕ ಅರಣ್ಯ ಇಲಾಖೆ ಮಾದರಿ ಯಾಗಬೇಕು. ಜೊತೆಗೆ ಸ್ವಚ್ಛತೆಗೆ ಮಹತ್ವ ಕೊಡಬೇಕು ಎಂದರು.ಇದಕ್ಕೂ ಮೊದಲು ಅವರು ಉಳವಿಯ ಪರಿಸರ ಸಂರಕ್ಷಣೆಗೆ ಎಂದು ನಿರ್ಮಿಸಲಾದ ಸಿಬ್ಬಂದಿಗಳ ಸುಸಜ್ಜಿತ ವಸತಿ ಗೃಹಗಳನ್ನು ಉದ್ಘಾಟಿಸಿದರು. ಸುಂದರ ಪರಿಸರ ಉಳಿಯಲು ನಾವು ನಿರಂತರ ಶ್ರಮ ವಹಿಸಬೇಕು. ಕಾಡಿನ ರಕ್ಷಕರಿಗೆ ರಕ್ಷಣೆಗೆಂದು ಈ ವಸತಿಗೃಹ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭ ನಂದಿಗದ್ದಾ ಗ್ರಾಪಂ ಮಾಜಿ ಅಧ್ಯಕ್ಷ ಅರುಣ್ ದೇಸಾಯಿ ಮಾತನಾಡಿ, ಕಾಡಿನ ರಕ್ಷಣೆಯ ಜೊತೆಗೆ ಸ್ಥಳೀಯರ ಅಗತ್ಯತೆಗಳಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು. ಕುಡಿಯುವ ನೀರು ,ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಹಕಾರ ಬಯಸಿದರು.ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನೀಲೇಶ್ ಶಿಂಧೆ, ಹಳಿಯಾಳ ಡಿಎಫ್‌ಓ, ಪ್ರಶಾಂತ ಕುಮಾರ, ಎಸಿಎಫ್ ಎಂ.ಎಸ್. ಕಳ್ಳಿಮಠ್, ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಉಳವಿಯ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮೊಕಾಶಿ, ಅರಣ್ಯ ಇಲಾಖೆಯ ಸಿಬ್ಬಂದಿ ಇತರರಿದ್ದರು.