ಕುಡಿತಿನಿ ಭೂ ಸಂತ್ರಸ್ತರಿಂದ ಪತ್ರ ಚಳವಳಿ

| Published : Jun 26 2024, 12:33 AM IST

ಸಾರಾಂಶ

555 ದಿನಗಳಿಂದ ಧರಣಿ ನಡೆಸುತ್ತಿರುವ ಕುಡಿತಿನಿ, ಹರಗಿನಡೋಣಿ ಮತ್ತಿತರ ಗ್ರಾಮಗಳ ಭೂ ಸಂತ್ರಸ್ತರು ಸೋಮವಾರ ಪತ್ರ ಚಳವಳಿ ನಡೆಸಿದರು.

ಬಳ್ಳಾರಿ: ಅರ್ಷಲ್ ಮಿತ್ತಲ್, ಉತ್ತಮ್ ಗಾಲ್ವ, ಎನ್‌ಎಂಡಿಸಿ ಕಂಪನಿಗಳು ರೈತರಿಂದ ಪಡೆದ ಜಮೀನುಗಳಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಕುಡಿತಿನಿಯಲ್ಲಿ ಕಳೆದ 555 ದಿನಗಳಿಂದ ಧರಣಿ ನಡೆಸುತ್ತಿರುವ ಕುಡಿತಿನಿ, ಹರಗಿನಡೋಣಿ ಮತ್ತಿತರ ಗ್ರಾಮಗಳ ಭೂ ಸಂತ್ರಸ್ತರು ಸೋಮವಾರ ಪತ್ರ ಚಳವಳಿ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಸಹಯೋಗದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ಭೂಸಂತ್ರಸ್ತರು ಪಾಲ್ಗೊಂಡು ರಾಜ್ಯ ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ ಘೋಷಣೆ ಕೂಗಿದರು.

ಇಲ್ಲಿನ ಗವಿಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಕೆಲ ಹೊತ್ತು ಧರಣಿ ನಡೆಸಿದರು.

ಇದೇ ವೇಳೆ ಮಾತನಾಡಿದ ರಾಜ್ಯ ಕಾರ್ಮಿಕ ಮುಖಂಡ ಯು.ಬಸವರಾಜ್ ಅವರು, ಮಿತ್ತಲ್, ಉತ್ತಮ್ ಗಾಲ್ವ ಹಾಗೂ ಎನ್‌ಎಂಡಿಸಿ ಕಂಪನಿಗಳು ರೈತರ ಕೃಷಿ ಜಮೀನುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆದು ಮೋಸ ಮಾಡಿವೆ. ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಪಡೆದು ಈವರೆಗೆ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಇದರಿಂದ ಕೈಗಾರಿಕೆಯಲ್ಲಿ ಮಕ್ಕಳಿಗೆ ಕೆಲಸ ಸಿಗುವ ಆಸೆಯಿಂದ ಜಮೀನು ಕಳೆದುಕೊಂಡ ರೈತರ ಕಂಗಾಲಾಗಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.

ಮುಖಂಡ ಜೆ.ಸತ್ಯಬಾಬು ಮಾತನಾಡಿ, ಅನ್ಯಾಯವಾಗಿರುವ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಹತ್ತಾರು ಬಾರಿ ಹೋರಾಟ ಮಾಡಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬರೀ ಭರವಸೆಯಲ್ಲಿಯೇ ರಾಜ್ಯ ಸರ್ಕಾರ ಸಮಯ ಕಳೆಯುತ್ತಿದೆ. ರೈತರ ಹಿತ ಕಾಯಲು ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ. ಹೈಕೋರ್ಟ್‌ನ ನ್ಯಾಯಮೂರ್ತಿಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿಕೊಂಡು, ಭೂ ಸಂತ್ರಸ್ತರು ಪತ್ರ ಚಳವಳಿಗೆ ಚಾಲನೆ ನೀಡಿದ್ದೇವೆ. ರೈತರಿಗೆ ಸರ್ಕಾರ ಮಾಡಿರುವ ಮೋಸ ಹಾಗೂ ರೈತರಿಗಾಗಿ ದೊಡ್ಡ ಅನ್ಯಾಯ ಕುರಿತು ಪತ್ರದಲ್ಲಿ ತಿಳಿಸಲಾಗಿದೆ. ಅಂಚೆ ಇಲಾಖೆ ಮೂಲಕ ನ್ಯಾಯಮೂರ್ತಿಗಳಿಗೆ ಪತ್ರಗಳನ್ನು ಕಳಿಸಿಕೊಡಲಾಗುತ್ತದೆ ಎಂದರು.

ರೈತರ ಜಮೀನುಗಳನ್ನು ಕೆಐಎಡಿಬಿ ಮೂಲಕ ವಶಕ್ಕೆ ಪಡೆದುಕೊಂಡ ಸರ್ಕಾರ ಮೋಸದ ಬೆಲೆ ಮಾರಾಟ ಮಾಡಿರುವ ಕುರಿತು ಪತ್ರದಲ್ಲಿ ತಿಳಿಸಲಾಗಿದ್ದು, ಇದು ನಿರಂತರ ಹೋರಾಟದ ಮತ್ತೊಂದು ಹಂತದ ಚಳವಳಿಯಾಗಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಕುಡಿತಿನಿ ಸೇರಿದಂತೆ ಹಗರಿನಡೋಣಿ, ಜಾನೆಕುಂಟೆ, ವೇಣಿ ವೀರಾಪುರ, ಸಿದ್ದಮ್ಮನಹಳ್ಳಿ, ಯರ್ರಂಗಳಿ ಹಾಗೂ ಕೊಳಗಲ್ಲು ಗ್ರಾಮಗಳ ಭೂ ಸಂತ್ರಸ್ತರು ಪತ್ರ ಚಳವಳಿಯಲ್ಲಿ ಭಾಗವಹಿಸಿದ್ದರು. ಅಂಚೆ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾಕಾರರಿಂದ ಪತ್ರಗಳನ್ನು ಸ್ವೀಕರಿಸಿದರು.