ಸಾರಾಂಶ
ರಾಮನಗರ: ನಗರದ ನಾಗರೀಕರಿಗೆ ಪೂರೈಸುತ್ತಿರುವ 24-7 ಕುಡಿಯುವ ನೀರಿನ ಯೋಜನೆ ಅನುಷ್ಠಾನದ ನಗರಸಭಾ ವಂತಿಕೆ 45 ಕೋಟಿ 60 ಲಕ್ಷ ರು.ಗಳನ್ನು ಭರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕುಡಿಯುವ ನೀರಿನ ವಂತಿಕೆ ಪಾವತಿಸುವ ವಿಚಾರ ಚರ್ಚೆಗೆ ಬಂದಾಗ ಅಷ್ಟೊಂದು ಮೊತ್ತವನ್ನು ನಗರಸಭೆಯಿಂದ ಪಾವತಿಸಲು ಸಾಧ್ಯವಾಗದ ಕಾರಣ ಅದನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಭರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.ನಗರದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು, ಶೇಕಡ 10ರಷ್ಟು ಹೆಚ್ಚುವರಿಯಾಗಿ ನೀರು ಪೋಲಾಗುತ್ತಿದೆ. ಕೆಲವು ವಾರ್ಡುಗಳಲ್ಲಿ ನೀರಿನ ಪೈಪ್ ಗಳನ್ನು ಬ್ಲಾಕ್ ಆಗುತ್ತಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ ಎಂದು ಸದಸ್ಯರಾದ ನಿಜಾಮುದ್ದೀನ್ ಷರೀಫ್ , ಅಕ್ಲಿಂ, ಸೋಮಶೇಖರ್ ಹಾಗೂ ಆರೀಫ್ ಕಿಡಿಕಾರಿದರು.
ನಾಗನಕಟ್ಟೆ, ಪಾಪ್ಯುಲರ್ ಶಾಲೆ ಬಳಿಯಿರುವ ಪಾರ್ಕ್ ಗಳಲ್ಲಿ ಮಳೆ ನೀರು ತುಂಬುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳ ಅಂಚಿನಲ್ಲಿ ಪ್ರಜ್ಞಾವಂತರೇ ಕಸ ಎಸೆಯುತ್ತಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯೆ ಬಿ.ಸಿ.ಪಾರ್ವತಮ್ಮ ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನಾಗರೀಕರು ಕಸ ಎಸೆಯುತ್ತಿರುವ ಜಾಗಗಳನ್ನು ಬ್ಲಾಕ್ ಸ್ಪಾಟ್ ಗಳಾಗಿ ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಪೌರ ಕಾರ್ಮಿಕರೊಬ್ಬರನ್ನು ನಿಲ್ಲಿಸಿ ಕಸ ಎಸೆಯಲು ಬಂದವರಿಗೆ ಗುಲಾಬಿ ಹೂ ನೀಡಿ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಆನಂತರವೂ ಚಾಳಿ ಬಿಡದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ನಗರಸಭೆ ಸ್ವಚ್ಛತಾ ರಾಯಭಾರಿಯಾಗಿ ಸೋಲೋ ರೈಡರ್ ಚಿತ್ರಾರಾವ್ ಅವರನ್ನು ನೇಮಿಸಿಕೊಳ್ಳುವುದು, 74 ಪೌರ ಕಾರ್ಮಿಕರನ್ನು ಹೊರ ಗುತ್ತಿಗೆಯಲ್ಲಿ ಪಡೆಯಲು ಜಿಲ್ಲಾಧಿಕಾರಿಯವರ ಅನುಮೋದನೆ ಪಡೆಯುವ ಬಗ್ಗೆ ಸದಸ್ಯರು ಚರ್ಚಿಸಿ ತೀರ್ಮಾನ ಕೈಗೊಂಡರು.
ಬೋಳಪ್ಪನಹಳ್ಳಿ ಕೆರೆ ಆಯ್ಕೆ:ಅಮೃತ 2.0 ಕೆರೆ ಅಭಿವೃದ್ಧಿ ಕಾಮಗಾರಿ ಯೋಜನೆಯಡಿ ಕೊತ್ತಿಪುರ ಭಕ್ಷಿಕೆರೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದರಿ ಕೆರೆಯ ಸುತ್ತ ವ್ಯವಸಾಯೇತರ ಭೂಮಿ ಇರುವುದರಿಂದ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಹಾಗಾಗಿ ಬೋಳಪ್ಪನಹಳ್ಳಿ ಕೆರೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಈ ವಿಷಯವಾಗಿ ಕೌನ್ಸಿಲ್ ಸಭೆಯ ಅಭಿಪ್ರಾಯ ನೀಡಿ ಎಂದು ಕೆ.ಶೇಷಾದ್ರಿ ಕೇಳಿದಾಗ ಸದಸ್ಯರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು.
ಎಂ.ಜಿ.ರಸ್ತೆಯಲ್ಲಿರುವ ನಗರಸಭೆ ಮಳಿಗೆಯ 11 ಅಂಗಡಿ ಮುಂಗಟ್ಟುಗಳ 2015-16 ರಲ್ಲಿ ಟೆಂಡರ್ ಮುಗಿದಿದ್ದು, ಅಂದಿನಿಂದ ಬಾಡಿಗೆ ಪಾವತಿಸಿಲ್ಲ. ಹಾಗಾಗಿ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಸಭೆ ನಡೆಸಿ ಬಾಡಿಗೆ ಪಾವತಿಸುವಂತೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅ.12ರೊಳಗೆ ಪಾವತಿಸಲು ಗಡುವು ನೀಡಿ, ಪಾವತಿಸದಿದ್ದಲ್ಲಿ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲು ಸಭೆ ನಿರ್ಣಯ ಕೈಗೊಂಡಿತು.2025-26ನೇ ಸಾಲಿನ ಶೇ.24.10, 7.25, ಮತ್ತು 5 ವ್ಯಕ್ತಿಗತ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಪೌರ ಕಾರ್ಮಿಕರ ಮನೆ ರಿಪೇರಿಗೆ ಧನಸಹಾಯ, ಪರಿಶಿಷ್ಟ ಜಾತಿಯವರಿಗೆ ಸ್ವಂತ ಉದ್ಯೋಗ ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎಸ್ಸಿ ಮತ್ತು ಹಿಂದುಳಿದ ವರ್ಗದವರಿಗೆ ಧನ ಸಹಾಯ ನೀಡಲು ಸಭೆ ಒಪ್ಪಿಗೆ ಸೂಚಿಸಿತು.
ನಗರಸಭೆಯ ಹೈಕೋರ್ಟ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ವಕೀಲರಾದ ಕೆಂಪೇಗೌಡರನ್ನು ನೇಮಿಸಿಕೊಳ್ಳುವುದು. ಚುನಾಯಿತ ಪ್ರತಿನಿಧಿಗಳ ಮಾಸಿಕ ಗೌರವ ಧನ ಪರಿಷ್ಕರಣೆ, ಪಿಡಬ್ಲ್ಯೂಡಿ ವೃತ್ತಕ್ಕೆ ದೇವರಾಜು ಅರಸು ವೃತ್ತ ನಾಮಕರಣ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅದ್ಯಕ್ಷ ಫೈರೋಜ್ ಪಾಷಾ, ಪೌರಾಯುಕ್ತ ಡಾ.ಜಯಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
9ಕೆಆರ್ ಎಂಎನ್ 3.ಜೆಪಿಜರಾಮನಗರ ನಗರಸಭೆಯಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅದ್ಯಕ್ಷ ಫೈರೋಜ್ ಪಾಷಾ, ಪೌರಾಯುಕ್ತ ಡಾ.ಜಯಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.