ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಾಸಕ ದಿನೇಶ್ ಗೂಳಿಗೌಡ ಹೇಳಿದರು.ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸಿ.ಅಪೂರ್ವಚಂದ್ರ ಷಷ್ಠಿ ಪೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 2201 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಇವುಗಳಲ್ಲಿ 10,685 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 4500 ಶಿಕ್ಷಕರ ಕೊರತೆ ಇರುವುದು ತಿಳಿದುಬಂದಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಗಮನಿಸಿದರೆ ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಅನುತೀರ್ಣರಾಗಿರುವವರೇ ಹೆಚ್ಚು. ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ಶಿಕ್ಷಕರ ಕೊರತೆ ನೀಗಿಸಲಾಗುವುದು ಎಂದರು.60 ವರ್ಷದ ಹಿಂದೆ ರೈತಾಪಿ ವರ್ಗದ ಮಕ್ಕಳಿಗಾಗಿ ಆರಂಭವಾದ ಈ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ. ನಾನು ಕೂಡ ಈ ಕಾಲೇಜಿನ ಹಳೆಯ ವಿದ್ಯಾರ್ಥಿ. ಶಿಕ್ಷಕ ವೃತ್ತಿ ಕೇವಲ ಪಾಠ ಮಾಡುವುದಲ್ಲ. ಅದು ಸಮಾಜ ನಿರ್ಮಾಣದ ಅತ್ಯಂತ ಪವಿತ್ರ ಕಾರ್ಯ. ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ಹರಿಸಿದ ಈ ಶಿಕ್ಷಣ ಸಂಸ್ಥೆ ಮತ್ತಷ್ಟು ಮಕ್ಕಳಿಗೆ ಜ್ಞಾನದ ಬೆಳಕು ನೀಡಲಿ ಎಂದು ಹಾರೈಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಮಾತನಾಡಿದರು. ಹಿರಿಯ ಗುರುಗಳನ್ನು ಗೌರವಿಸಿ ಸತ್ಕರಿಸುವ ಮೂಲಕ ಅಪೂರ್ವಚಂದ್ರ ಅವರು ಷಷ್ಠಿ ಪೂರ್ತಿ ಕಾರ್ಯಕ್ರಮ ಆಚರಿಸಿಕೊಂಡರು. ಇದೇ ವೇಳೆ ಸಿಇಟಿ ಸ್ಪರ್ಧಾತ್ಮಕ ಚಟುವಟಿಕೆ ಪುಸ್ತಕ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಸಕರಾದ ಪ್ರಕಾಶ್ ಕೋಳಿವಾಡ, ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಡಾ. ಜಯಪ್ರಕಾಶ್ ಗೌಡ, ಪುರಸಭಾ ಅಧ್ಯಕ್ಷರಾದ ಕೋಕಿಲಾ ಅರುಣಾ, ಚನ್ನೇಗೌಡ ವಿದ್ಯಾನಿಲಯದ ಗೌರವಾಧ್ಯಕ್ಷ ಕೆ.ಟಿ.ಚಂದು, ಅಧ್ಯಕ್ಷ ಸ್ವರೂಪ್ ಚಂದ್ ಸೇರಿದಂತೆ ನಾನಾ ಗಣ್ಯರು, ಚನ್ನೇಗೌಡ ವಿದ್ಯಾನಿಲಯದ ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.