ಪೋಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಮತ್ತು ಕ್ರೀಡಾಸಕ್ತಿಗೆ ಉತ್ತೇಜನ ನೀಡಬೇಕು ಎಂದು ಬೊಳ್ಳಂಡ ಪ್ರಮೀಳ ಅಯ್ಯಪ್ಪ ಸಲಹೆ ನೀಡಿದರು.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಪೋಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಮತ್ತು ಕ್ರೀಡಾಸಕ್ತಿಗೆ ಉತ್ತೇಜನ ನೀಡಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತರಾದ ಒಲಂಪಿಯನ್ ಬೊಳ್ಳಂಡ ಪ್ರಮೀಳ ಅಯ್ಯಪ್ಪ ಸಲಹೆ ನೀಡಿದರು.
ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನೂ ಉದ್ಘಾಟಿಸಿ ಅವರು ಮಾತನಾಡಿದರು.ಪೋಷಕರು ಅರಿತುಕೊಳ್ಳುತ್ತಿಲ್ಲ:
ಪ್ರಸ್ತುತ ದಿನಗಳಲ್ಲಿ ಮಕ್ಕಳ ಆಸಕ್ತಿಯ ವಿಷಯಗಳನ್ನು ಪೋಷಕರು ಅರಿತುಕೊಳ್ಳುತ್ತಿಲ್ಲ. ತಮ್ಮ ಕನಸನ್ನು ಮಕ್ಕಳಿಂದ ನನಸು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪೋಷಕರು ಮಕ್ಕಳ ಇಚ್ಛೆಗೆ ತಕ್ಕಂತೆ ಸ್ಫೂರ್ತಿ ತುಂಬಬೇಕು ಮತ್ತು ಪ್ರೋತ್ಸಾಹ ನೀಡಬೇಕು. ನನ್ನ ಕ್ರೀಡಾಸಕ್ತಿಗೆ ತಂದೆ, ಸಹೋದರ ಹಾಗೂ ಪತಿ ಪ್ರೋತ್ಸಾಹ ನೀಡಿದಪರಿಣಾಮ ನಾನು ಒಲಂಪಿಯನ್ ಆಗಿದ್ದೇನೆ. ಮೊದಲ ಬಾರಿ ಒಲಂಪಿಯನ್ ಆಗಬೇಕೆನ್ನುವ ಕನಸು ಭಗ್ನವಾದಾಗ ಕ್ರೀಡಾಕ್ಷೇತ್ರವನ್ನು ತ್ಯಜಿಸಬೇಕೆನ್ನುವ ನಿರ್ಧಾರಕ್ಕೆ ಬಂದೆ. ಆದರೆ ಮನೆಯಲ್ಲಿ ನನಗೆ ದೊರೆತ ಪ್ರೋತ್ಸಾಹದಿಂದ ಮತ್ತು ನಾಲ್ಕು ವರ್ಷಗಳ ನಿರಂತರ ಪ್ರಯತ್ನದಿಂದ ಒಲಂಪಿಯನ್ ಆಗಲು ಸಾಧ್ಯವಾಯಿತು. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಪೋಷಕರ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಮಾಜಿ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಪುಷ್ಪಾ ಕುಟ್ಟಣ್ಣ ಮಾತನಾಡಿ ಸಮಾಜದ ಅಡಿಪಾಯವಾಗಿರುವ ಕುಟುಂಬಗಳ ಮೂಲಕವೇ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಬೆಳೆಸಬೇಕೆನ್ನುವ ಪಾಂಡಂಡ ಕುಟ್ಟಪ್ಪ ಅವರ ಚಿಂತನೆ ಶ್ರೇಷ್ಠ ಪರಿಕಲ್ಪನೆಯಾಗಿದೆ.ಈ ಪ್ರಯತ್ನ ಇಂದು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಜಿಲ್ಲೆಯ ಹಲವೆಡೆ ಕ್ರೀಡಾಕೂಟಗಳು ನಡೆಯುತ್ತಿವೆ ಎಂದರು. ಹಿರಿಯರು, ಕಿರಿಯರು, ಮಹಿಳೆಯರು ಹಾಗೂ
ಮಕ್ಕಳು ಒಗ್ಗೂಡಿ ಹಾಕಿ ಕ್ರೀಡೆಯಲ್ಲಿ ಆಟವಾಡುವ ಅವಕಾಶವಿರುವುದು ಇಡೀ ವಿಶ್ವದಲ್ಲಿ ಕೊಡಗಿನಲ್ಲಿ ಮಾತ್ರ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಉತ್ತಮ ಬೆಳವಣಿಗೆಯಾಗಿದೆ:
ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಹಲವು ವಿಶೇಷತೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಹಾಕಿಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೊಂದು ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವಾಗಬೇಕು ಮತ್ತು ಒಗ್ಗಟ್ಟನ್ನು ಮೂಡಿಸಬೇಕು. ಪಾಂಡ೦ಡ ಕುಟ್ಟಪ್ಪ ಅವರ ಪರಿಕಲ್ಪನೆಗೆ ಕೊಡವ ಹಾಕಿ ಅಕಾಡೆಮಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಶಕ್ತಿ ತುಂಬಬೇಕು ಎಂದರು.ಮಾಜಿ ಅಂತಾರಾಷ್ಟ್ರೀಯ ಹಾಕಿಪಟು ಕಾಳಿಮಾಡ ಎಂ.ಸೋಮಯ್ಯ ಮಾತನಾಡಿ ಪ್ರೋತ್ಸಾಹ ಮತ್ತು ಪ್ರಾಯೋಜಕತ್ವದ ಸಹಕಾರವಿಲ್ಲದಿದ್ದರೆ ಯಾವುದೇ ಕ್ರೀಡೆಗಳನ್ನು ಅಥವಾ ಕ್ರೀಡಾಪಟುಗಳನ್ನು ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಹಾಕಿಯ ಬೆಳವಣಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎಸ್‌ಎಲ್‌ಎನ್ ಗ್ರೂಪ್ ನ ಸಿಇಒ ಸಾಹಿಬ್ ಸಿಂಗ್ ಮಾತನಾಡಿ ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ.ಇನ್ನು ಮುಂದೆಯೂ ಹಾಕಿ ಉಳಿಯಲಿ, ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಹಾಕಿ ಅಕಾಡೆಮಿ ಹಾಕಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹನೀಡಲಿದೆ. ಪಾಂಡ೦ಡ ಕುಟ್ಟಪ್ಪ ಅವರ ಹಲವು ವರ್ಷಗಳ ಕನಸನ್ನು ನನಸು ಮಾಡಿದ ತೃಪ್ತಿ ನಮಗಿದೆ ಎಂದರು.
ಎಸ್‌ಎಲ್‌ಎನ್ ಗ್ರೂಪ್ ನ ಪ್ರಮುಖರಾದ ವೆಂಕಟಾಚಲಂ ಸಾತಪ್ಪನ್, ವೇಲಾಯುಧಂ ಮಣಿ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪ೦ಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರಂಭಿಕ 1997 ರಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳೆದ 25 ವರ್ಷಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ 13 ತಂಡಗಳ ನಡುವೆ ಟ್ರೋಫಿಗಾಗಿ ಐದು ದಿನಗಳ ಕಾಲ ಸೆಣಸಾಟ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕಳೆದ 25 ವರ್ಷಗಳ ಕಾಲ ಹಾಕಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿರುವ 25 ಕೊಡವ ಕುಟುಂಬಗಳ ಪಟ್ಟೆದಾರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದರು.------------------------------------------------
ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ : ಮೊದಲ ದಿನದ ಫಲಿತಾಂಶನಾಪೋಕ್ಲು: ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ''''''''ಯ ಮೊದಲ ದಿನದ ಹಣಾಹಣಿಯಲ್ಲಿ ಮಂಡೇಪಂಡ ತಂಡ ಪರದಂಡ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲವು ಸಾಧಿಸಿತು.ಮಂಡೇಪಂಡ ಪರ ಚಂದನ್ ಕಾರ್ಯಪ್ಪ ಹಾಗೂ ಚಂಗಪ್ಪ ಎಂ.ಪಿ ತಲಾ ಒಂದು ಗೋಲು ಬಾರಿಸಿದರು. ಪರದಂಡ ಪರ ರಂಜನ್ ಅಯ್ಯಪ್ಪ ಗೋಲು ದಾಖಲಿಸಿದರು.ಚೆಪ್ಪುಡಿರ ಮತ್ತು ಪಳಂಗಂಡ ನಡುವಿನ ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾದಲ್ಲಿ ಅಂತ್ಯಗೊಂಡಿತು. ನೆಲ್ಲಮಕ್ಕಡ ಮತ್ತು ಮಾಚಮಾಡ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 6-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪೂವಣ್ಣ ಹಾಗೂ ಅಯ್ಯಪ್ಪ ತಲಾ ಎರಡು ಗೋಲು ಬಾರಿಸಿದರು. ತಿಮ್ಮಯ್ಯ ಹಾಗೂ ಸಚಿನ್ ತಲಾ ಒಂದು ಗೋಲು ದಾಖಲಿಸಿದರು. ತಲಾ ಒಂದು ಗೋಲು ದಾಖಲಾಗುವ ಮೂಲಕ ಕಲಿಯಂಡ ಮತ್ತು ಕುಪ್ಪಂಡ ನಡುವಿನ ಪಂದ್ಯ ಡ್ರಾ ಗೊಂಡಿತು. ಕಲಿಯಂಡ ಪರ ಚಿರಂತ್ ಹಾಗೂ ಕುಪ್ಪಂಡ ಪರ ಸೋಮಯ್ಯ ಗೋಲು ಬಾರಿಸಿದರು.