ವಾಹನ ರಿಪೇರಿಗೆ ಹಣ ಕೊಡದ ಲಿಬರ್ಟಿ ಜನರಲ್‌ ಇನ್ಸೂರೆನ್ಸ್‌ ಕಂಪನಿಗೆ ದಂಡ ಮತ್ತು ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಧಾರವಾಡ:

ವಾಹನ ರಿಪೇರಿಗೆ ಹಣ ಕೊಡದ ಲಿಬರ್ಟಿ ಜನರಲ್‌ ಇನ್ಸೂರೆನ್ಸ್‌ ಕಂಪನಿಗೆ ದಂಡ ಮತ್ತು ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಹಿರಿಯ ನಾಗರಿಕರಾದ ಹನಮಂತ ಸಿಂಗ್‌ ಪುರೋಹಿತ ತಮ್ಮ ವಾಹನಕ್ಕೆ ಲಿಬರ್ಟಿ ಇನ್ಸೂರೆನ್ಸ್‌ ಕಂಪನಿಯಲ್ಲಿ ವಿಮೆ ಮಾಡಿಸಿದ್ದರು. ಪಾಲಸಿ ಚಾಲ್ತಿಯಲ್ಲಿ ಇರುವಾಗಲೇ ವಾಹನವು ಹುಬ್ಬಳ್ಳಿಯ ಎಪಿಎಂಸಿ ಅಮರಗೋಳ ಸಮೀಪ ಅಪಘಾತಕ್ಕೀಡಾಗಿ ಜಖಂ ಆಗಿತ್ತು. ಮಾನಿಕಬಾಗ್‌ ಆಟೋಮೊಬೈಲ್‌ನಲ್ಲಿ ರಿಪೇರಿಗೆ ಬಿಟ್ಟಾಗ ಅಂದಾಜು ₹ 3.27 ಲಕ್ಷ ವೆಚ್ಚ ಆಗುವುದಾಗಿ ತಿಳಿಸಿದ್ದರು. ಈ ವಾಹನ ರಿಪೇರಿ ವೆಚ್ಚ ಕೊಡುವಂತೆ ಇನ್ಸೂರೆನ್ಸ್‌ ಕಂಪನಿಗೆ ಕೇಳಿದಾಗ ಸ್ಪಂದಿಸಿಲ್ಲ. ಆದ್ದರಿಂದ ಹನಮಂತ ಸಿಂಗ್‌ ಅವರು ಆಯೋಗದ ಎದುರು ದೂರು ಸಲ್ಲಿಸಿದ್ದರು.

ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ವಿಮೆ ಅಪಘಾತದ ವೇಳೆಯಲ್ಲಿ ಚಾಲ್ತಿಯಲ್ಲಿರುವುದು ದಾಖಲೆಯಿಂದ ತಿಳಿದು ಬಂದಿದೆ. ತಾವು ಹಾಜರುಪಡಿಸಿದ ಮಾನಿಕಬಾಗ್‌ ಆಟೋ ಮೊಬೈಲ್‌ ಟ್ಯಾಕ್ಸ್‌ ಇನ್‌ವಾಯಸ್‌ ಸಹ ಇದೆ. ತಮ್ಮ ವಾಹನ ರಿಪೇರಿ ಮಾಡಿಸಿರುವುದು ಆಯೋಗದ ಗಮನಕ್ಕಿದೆ. ಹೀಗಾಗಿ ವಾಹನದ ದುರಸ್ತಿಗೆ ಆಗಿರುವ ವೆಚ್ಚ ನೀಡುವ ಜತೆಗೆ ಅನಾನುಕೂಲ ಮತ್ತು ಮಾನಸಿಕ ವೇದನೆಗಾಗಿ ₹ 50 ಸಾವಿರ ಪರಿಹಾರ ಮತ್ತು ₹ 10 ಸಾವಿರ ಪ್ರಕರಣದ ವೆಚ್ಚವನ್ನು ಒಂದು ತಿಂಗಳೊಳಗೆ ಕೊಡುವಂತೆ ಲಿಬರ್ಟಿ ಜನರಲ್‌ ಇನ್ಸುರೆನ್ಸ್‌ಗೆ ಆಯೋಗ ನಿರ್ದೇಶಿಸಿದೆ.