- ಕುದುರೆಗುಂಡಿ ಸರ್ಕಾರಿ ಶಾಲೆಯಲ್ಲಿ ಅಕ್ಷರ ಲೋಕ ಗ್ರಂಥಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ರಂಥಾಲಯ ಜ್ಞಾನ ಭಂಡಾರ ಹೆಚ್ಚಿಸುವ ದೇಗುಲಗಳಿದ್ದಂತೆ ಎಂದು ಕೊಪ್ಪದ ಯಡಗೆರೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ತಿಳಿಸಿದರು.
ಶುಕ್ರವಾರ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಅಕ್ಷರ ಲೋಕ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಗ್ರಂಥಾಲಯ ಇದ್ದರೆ ವಿದ್ಯಾರ್ಥಿಗಳಿಗೆ ಓದುವ ಅಭ್ಯಾಸ ಹೆಚ್ಚಾಗಲಿದೆ. ಕುತೂಹಲದಿಂದ ಪುಸ್ತಕ ಓದುತ್ತಾ ಮುಂದೆ ನಿರಂತರ ಓದುವ ರೂಡಿಯಾಗುತ್ತದೆ. ಶಿಕ್ಷಕರ ಪರಿಶ್ರಮದಿಂದ ಪ್ರಾರಂಭವಾದ ಗ್ರಂಥಾಲಯವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಮೇದೂರ ಮಾತನಾಡಿ, ಗ್ರಂಥಾಲಯ ನಿರ್ಮಿ ಸಲು ಕ್ಯಾಂಪ್ಕೋ ಸಂಸ್ಥೆ ₹1 ಲಕ್ಷ ಹಾಗೂ ಹಲವಾರು ದಾನಿಗಳು ದೇಣಿಗೆ ನೀಡಿದ್ದಾರೆ. ಗ್ರಂಥಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರಿ ದೀಪವಾಗಲಿದೆ ಎಂದರು. ಗ್ರಂಥಾಲಯ ಉದ್ಘಾಟನೆ ನೆನಪಿಗಾಗಿ ವಿದ್ಯಾರ್ಥಿಗಳೇ ರಚಿಸಿದ ಚಿಗರು ಎಂಬ ಕೃತಿಯನ್ನು ಪೋಷಕರಾದ ಶಾಲಿನಿ ಸಂತೋಷ್ ಬಿಡುಗಡೆ ಮಾಡಿದರು. ಅಕ್ಷರ ಲೋಕ ಎಂಬ ನಾಮಾಂಕಿತ ಫಲಕವನ್ನು ಪೋಷಕ ಮನೋಹರ್ ಅನಾವರಣಗೊಳಿಸಿದರು. ದಾನಿಗಳ ಮಾಹಿತಿ ಫಲಕವನ್ನು ದಾನಿ ವೈ.ಎಸ್.ಮಹೇಶ್ ಅನಾವರಣಗೊಳಿಸಿದರು. ದಾನ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಚಿತ್ರ ಕಲೆ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಪಾಪಣ್ಣ ವಹಿಸಿದ್ದರು. ಸಭೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನುಗ್ಗಿ ಮಂಜುನಾಥ್, ಎಸ್.ಡಿಎಂಸಿ ಸದಸ್ಯರಾದ ಸತೀಶ್, ಮಂಜುನಾಥ್, ಅಶ್ವಿನಿ, ನೀತುಶ್ರೀ, ಉಮಾ, ಶಾಲಿನಿ, ಸಹ ಶಿಕ್ಷಕರಾದ ಶಂಕರಗೌಡ, ಶಿಲ್ಪ ವಿ ಭಟ್, ವಾಣಿ, ಉಷಾ, ರೂಪ ಇದ್ದರು.