ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ ನಿಜ ಆದರೆ ಪುಸ್ತಕಗಳಿಂದ ದೊರೆಯುವ ಜ್ಞಾನ ಮಾತ್ರ ಶಾಶ್ವತ

ಕಾರಟಗಿ: ಡಿಜಿಟಲ್ ಸಾಧನೆ ಮೊಬೈಲ್,ಟಿವಿ, ಕಂಪ್ಯೂಟರ್‌ಗಳಿಂದ ಮಕ್ಕಳನ್ನು ದೂರವಿಟ್ಟು ಪುಸ್ತಕ ಓದಿನ ವೇಗ ವಿಸ್ತರಿಸಲು ಗ್ರಂಥಾಲಯ ಅಗತ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ರೇಖಾ ರಾಜಶೇಖರ ಆನೆಹೊಸುರ ಹೇಳಿದರು.

ಇಲ್ಲಿನ ಪುರಸಭೆ ವ್ಯಾಪ್ತಿಯ ೨೩ನೇ ವಾರ್ಡ್‌ನ ದೇವಿಕ್ಯಾಂಪ್‌ನಲ್ಲಿ ಪುರಸಭೆಯಿಂದ ಸ್ಥಾಪಿಸಲಾದ ನೂತನ ಗ್ರಂಥಾಲಯ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ ನಿಜ ಆದರೆ ಪುಸ್ತಕಗಳಿಂದ ದೊರೆಯುವ ಜ್ಞಾನ ಮಾತ್ರ ಶಾಶ್ವತ. ಅಲ್ಲದೆ ಎಲ್ಲ ವಯಸ್ಸಿನ ಮಕ್ಕಳ ಕಲಿಕೆ,ಭಾಷಾ ಬೆಳವಣಿಗೆ, ಬರವಣಿಗೆಯ ಮೂಲಭೂತ ತಿಳಿವಳಿಕೆಯ ಕೀಲಿಯೆಂದರೆ ಪುಸ್ತಕ. ಈ ಗ್ರಂಥಾಲಯ ಆರಂಭಕ್ಕೆ ಕೇಲವೆ ಕೆಲವು ಪುಸ್ತಕಗಳು ಲಭಿಸಿವೆ. ಇನ್ನು ಓದುಗರಿಗೆ ಅನುಕೂಲವಾಗುವಂತೆ ಬಹಳಷ್ಟು ಪುಸ್ತಕ, ದೈನಂದಿನ ಎಲ್ಲ ದಿನಪತ್ರಿಕೆ ಗ್ರಂಥಾಲಯಕ್ಕೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕ್ಯಾಂಪಿನ ಮಕ್ಕಳು ಗ್ರಂಥಾಲಯಗಳಲ್ಲಿ ಲಭ್ಯವಿರುವ ದಿನಪತ್ರಿಕೆ, ಪುಸ್ತಕ ಸ್ಪರ್ಧಾತ್ಮಕ ಪುಸ್ತಕ ಓದುವ ಮೂಲಕ ತಮ್ಮ ಜ್ಞಾನ ಬೆಳೆಸಿಕೊಳ್ಳಿ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ ಎಚ್.ಈಶಪ್ಪ ಇಟ್ಟಂಗಿ ಮಾತನಾಡಿ,೨೩ನೇ ವಾರ್ಡ್‌ನ ದೇವಿಕ್ಯಾಂಪ್‌ನಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ವಾರ್ಡ್‌ನ ಸದಸ್ಯೆ ಜಿ.ಅರುಣಾದೇವಿಯ ಅವರ ಆಸ್ತಕಿ ಮತ್ತು ಕ್ಯಾಂಪಿನ ವಾಸಿಸುವ ಮಧ್ಯಮ ವರ್ಗ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುತ್ತದೆ. ಅವರ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಈ ಒಂದು ಗ್ರಂಥಾಲಯ ಜ್ಞಾನದಾಹ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ, ಮುಖಂಡ ರಾಜಶೇಖರ ಆನೆಹೋಸುರ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಹಿಂದುಳಿದಿರುವ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರತರಲು ಈ ಗ್ರಂಥಾಲಯ ಬಹಳ ಉಪಯುಕ್ತವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಸದಸ್ಯ ಜಿ. ಅರುಣಾದೇವಿ ಕ್ಯಾಂಪಿನ ಮಕ್ಕಳಿಗೆ ಈ ಗ್ರಂಥಾಲಯ ದಾರಿದೀಪವಾಗಲಿದೆ. ಕ್ಯಾಂಪ್‌ದಿಂದ ಪಟ್ಟಣಕ್ಕೆ ನಿತ್ಯ ಶಾಲೆ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಅವರಿಗೆ ನಾವೇ ಆಟೋ, ಇನ್ನಿತರ ವಾಹನದ ಸೌಕರ್ಯ ಮಾಡಿದ್ದೇವೆ. ಈ ಗ್ರಂಥಾಲಯದಲ್ಲಿ ನಾವುಗಳು ಗಂಭೀರವಾಗಿ ಅಧ್ಯಯನ ಮಾಡಬೇಕು. ಪುಸ್ತಕ ಓದುವ ಮೂಲಕ ಜ್ಞಾನ ಭಂಡಾರ ಸಂಪಾಧಿಸಿಕೊಳ್ಳಬೇಕು ಈ ಗ್ರಂಥಾಲಯ ನೀಡುವ ಸಂದೇಶವೆಂದರೆ ಜ್ಞಾನವೃದ್ಧಿಗಾಗಿ ಒಳಗೆ ಬಾ ಮಾನವ ಸೇವೆಗೆ ಹೊರಗೆ ಹೋಗು ಎಂಬ ಸಂದೇಶದೊಂದಿಗೆ ಈ ಗ್ರಂಥಾಯದ ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು.

ಇದಕ್ಕೂ ಮುಂಚೆ ನೂತನ ಗ್ರಂಥಾಲಯದಲ್ಲಿ ಗಣೇಶ ಮತ್ತು ಸರಸ್ವತಿ ಭಾವಚಿತ್ರಕ್ಕೆ ಅರ್ಚಕ ಚನ್ನಬಸವಸ್ವಾಮಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಪುರಸಭೆ ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸದಸ್ಯರಾದ ಸೌಮ್ಯ ಮಹೇಶ ಕಂದಗಲ್, ಸುಪ್ರೀಯಾ ಅರಳಿ, ಜಿ. ರಾಜು, ಶಂಕರ ಪವಾರ ಸೇರಿದಂತೆ ಮತ್ತಿತರರು ಇದ್ದರು.