ಎಸ್.ಎಂ. ಸೈಯದ್
ಗಜೇಂದ್ರಗಡ: ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆ ಜಾರಿಗೆ ತರುತ್ತಿದ್ದು, ಪಟ್ಟಣದ ಶಿವಾಜಿಪೇಟೆಯ ಮಹಿಳೆಯೊಬ್ಬರು ಕಟ್ಟಿಕೊಂಡಿದ್ದ ಹೊಸ ಉದ್ಯೋಗದ ಕನಸಿಗೆ ಪುರಸಭೆ ಸತಾಯಿಸುವ ಮೂಲಕ ಸರ್ಕಾರದ ಆಶಯಕ್ಕೆ ಕೊಡಲಿಪೆಟ್ಟು ನೀಡಲು ಅಧಿಕಾರಿಗಳು ಮುಂದಾಗಿದ್ದಾರಾ ಎಂಬುದು ಚರ್ಚೆಗೆ ಗ್ರಾಸವಾಗಿದೆ.ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಕುಷ್ಟಗಿ ರಸ್ತೆಯಲ್ಲಿನ ತಮ್ಮ ಸ್ವಂತ ಜಾಗದಲ್ಲಿ ಸಣ್ಣ ಕಟ್ಟಿಗೆ ಕೊರೆಯವ ಯಂತ್ರ ಹಾಕಿಕೊಳ್ಳಲು ಪುರಸಭೆಗೆ ಪರವಾನಗಿ ಬೇಡಿದ್ದರಿಂದ ಕೆಲವು ತಿಂಗಳ ಹಿಂದೆ ಅಧಿಕಾರಿಗಳು ಉದ್ದೇಶಿತ ಸ್ಥಳಕ್ಕೆ ಬೇಟಿ ನೀಡಿ ಕಸ್ತೂರೆವ್ವ ಬೋಸಲೆ ಎಂಬ ಮಹಿಳೆಯಿಂದ ತೆರಿಗೆ ತುಂಬಿಸಿಕೊಂಡಿದ್ದಾರೆ.
ಈ ಮಹಿಳೆ ವಿವಿಧ ಗುಂಪುಗಳಲ್ಲಿ ಸಾಲ ಮಾಡಿ ಪುರಸಭೆ ಅಧಿಕಾರಿಗಳು ಜಿಪಿಎಸ್ ಮಾಡಿದ ಜಾಗದಲ್ಲಿ ತಗಡಿನ ಶೆಡ್ ನಿರ್ಮಿಸಿ ಯಂತ್ರವನ್ನು ತಂದಿಟ್ಟ ಬಳಿಕ ಅಧಿಕಾರಿಗಳು ಯಂತ್ರ ಆರಂಭಿಸಲು ಅವಕಾಶ ಇಲ್ಲ ಎನ್ನುತ್ತಿರುವುದು ಮಹಿಳೆಯ ಕನಸಿಗೆ ತಣ್ಣೀರೆರಚಿದಂತಾಗಿದೆ.ಪಟ್ಟಣದ ಪುರಸಭೆ ವ್ಯಾಪ್ತಿಯ ೧೭ನೇ ವಾರ್ಡಿನಲ್ಲಿನ ಕುಷ್ಟಗಿ ರಸ್ತೆಯಲ್ಲಿ ಸಣ್ಣ ಕಟ್ಟಿಗೆ ಕೊರೆಯುವ ಯಂತ್ರವನ್ನು ಹಾಕಲು ಮುಂದಾದಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಿಪಿಎಸ್ ಫೋಟೋ ಸಹ ತೆಗೆದುಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳು ಉದ್ಯೋಗಕ್ಕೆ ಪರವಾನಗಿ ನೀಡುವ ಕನಸು ಚಿಗುರೊಡೆದು ಪತಿ ಕಲಿತಿದ್ದ ಉದ್ಯೋಗ ಮುಂದುವರಿಸಿದರೆ ಬದುಕಿನ ಬಂಡಿ ಸಾಗುತ್ತದೆ ಎಂದು ಕಸ್ತೂರೆವ್ವ ಬೋಸಲೆ ಅವರು ಪುರಸಭೆಗೆ ಅಂದಾಜು ₹೧೦ ಸಾವಿರ ಹಣವನ್ನು ತುಂಬಿದ್ದಾರೆ. ಬಳಿಕ ಶೆಡ್ ನಿರ್ಮಿಸಲು ಹಾಗೂ ಯಂತ್ರ ತರಲು ವಿವಿಧ ಗುಂಪುಗಳಲ್ಲಿ ಅಂದಾಜು ₹೩ ಲಕ್ಷ ಸಾಲ ಮಾಡಿದ್ದಾರೆ. ಪರಿಣಾಮ ಗುಂಪಿಗೆ ಸಾಲ ತುಂಬಲು ಅವರಿವರ ಬಳಿ ಸಾಲ ಮಾಡುವ ಸ್ಥಿತಿ ಬಂದಿದೆ.
ನಿರ್ಮಿಸಿರುವ ಶೆಡ್‌ಗೆ ವಿದ್ಯುತ್ ಸಂಪರ್ಕ ನೀಡಿ ಎಂದರೆ ಹೆಸ್ಕಾಂ ಅಧಿಕಾರಿಗಳು ಪುರಸಭೆಯಿಂದ ಎನ್‌ಒಸಿ ಹಾಗೂ ಡಿಒಟಿ ಬೇಕು ಎನ್ನುತ್ತಿದ್ದಾರೆ. ನಿರ್ಮಿಸಿರುವ ಶೆಡ್ ಬಳಿ ಈಗಾಗಲೇ ಬೇರೆಯವರಿಗೆ ಪರವಾನಗಿ ನೀಡಿದ್ದಾರೆ. ಆದರೆ ನಮಗೆ ನೀಡಲು ಆಗಲ್ಲ ಎನ್ನುತ್ತಿದ್ದಾರೆ. ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಮಗೆ ವಯಸ್ಸಾಗಿದೆ, ಇನ್ನೊಬ್ಬರ ಹೊಲದಲ್ಲಿ ಅಥವಾ ಅಂಗಡಿಯಲ್ಲಿ ಕೆಲಸ ಮಾಡಲು ಆಗದ ಸ್ಥಿತಿಯಿದೆ. ಮೇಲಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕು ಎಂದು ಕಸ್ತೂರೆವ್ವ ಬೋಸಲೆ ಕಣ್ಣೀರಿಟ್ಟರು.
ಬೀದಿಪಾಲು ಮಾಡುವ ಪ್ರಯತ್ನ: ಸ್ಥಳೀಯ ಆಡಳಿತ ಮತ್ತು ರಾಜಕಾರಣಿಗಳು ದುಡಿದು ತಿನ್ನುವ ಅವಕಾಶಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು ಹೊರತು ಯಾವುದೋ ಖಾಸಗಿ ಹಿತಾಸಕ್ತಿಗೆ ಒಳಗಾಗಿ ನಿಯಮಾವಳಿಗಳ ಹೆಸರಿನಲ್ಲಿ ಅವರನ್ನು ಬೀದಿಪಾಲು ಮಾಡುವ ಪ್ರಯತ್ನಕ್ಕೆ ಮುಂದಾಗಬಾರದು. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ತಿಳಿಸಿದರು.ನ್ಯಾಯ ಕೊಡಿಸಿ: ಸಣ್ಣ ಕಟ್ಟಿಗೆ ಕೊರೆಯುವ ಉದ್ಯೋಗ ಆರಂಭಕ್ಕೆ ಪರವಾನಗಿ ಬೇಡಿದಾಗ ತೆರಿಗೆ ತುಂಬಿಸಿಕೊಂಡು, ಜಾಗಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇದೀಗ ಪರವಾನಗಿ ನೀಡಲ್ಲ ಎಂದಿದ್ದರೆ ನಾವು ಗುಂಪಿನಲ್ಲಿ ಸಾಲ ಮಾಡುತ್ತಿರಲಿಲ್ಲ. ದಯಮಾಡಿ ನಮಗೆ ನ್ಯಾಯ ಕೊಡಿಸಲು ಮೇಲಧಿಕಾರಿಗಳು ಮುಂದಾಗಬೇಕು ಎಂದು ನೊಂದ ಮಹಿಳೆ ಕಸ್ತೂರೆವ್ವ ಬೋಸಲೆ ತಿಳಿಸಿದರು.
ವಸತಿ ಪ್ರದೇಶ: ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಸಣ್ಣ ಕಟ್ಟಿಗೆ ಕೊರೆಯಲು ಪರವಾನಗಿ ಕೇಳಿದ್ದ ಜಾಗವು ವಸತಿ ಪ್ರದೇಶವಾಗಿದ್ದರಿಂದ ಪರವಾನಗಿ ರದ್ದು ಪಡಿಸಲಾಗಿದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದರು.