ಸಾರಾಂಶ
ನ್ಯಾಯಾಲಯದ ಆದೇಶದಂತೆ ಡಿಜೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಕೇವಲ ಎರಡು ಸ್ಪೀಕರ್ ಬಾಕ್ಸ್ ಮಾತ್ರ ಬಳಸಬಹುದು.
ಹೂವಿನಹಡಗಲಿ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿಸಭೆ ಆಯೋಜಿಸಲಾಗಿತ್ತು.ಈ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನ್ಯಾಯಾಲಯದ ಆದೇಶದಂತೆ ಡಿಜೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಕೇವಲ ಎರಡು ಸ್ಪೀಕರ್ ಬಾಕ್ಸ್ ಮಾತ್ರ ಬಳಸಬಹುದು. ಅದಕ್ಕೆ ಸಮಯಮಿತಿ ಇದೆ. ರಾತ್ರಿ 10 ಗಂಟೆಯ ನಂತರದಲ್ಲಿ ಧ್ವನಿ ವರ್ಧಕಗಳನ್ನು ಬಳಕೆ ಮಾಡುವಂತಿಲ್ಲ. ಹಬ್ಬದ ಹೆಸರಿನಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಸಿಕ್ಕಸಿಕ್ಕ ಕಡೆಗಳಲ್ಲಿ ಹಾಕಬಾರದು. ಇದಕ್ಕೆ ಪುರಸಭೆ, ಗ್ರಾಪಂ ಅಧಿಕಾರಿಗಳಿಂದ ಪರವಾನಗೆ ಪಡೆದುಕೊಳ್ಳಬೇಕೆಂದು ಹೇಳಿದರು.ಸಿಪಿಐ ದೀಪಕ್ ಬೂಸರಡ್ಡಿ ಮಾತನಾಡಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೌಹಾರ್ದಯುತವಾಗಿ ಆಚರಣೆ ಮಾಡಿ, ಯಾವುದೇ ಕಾರಣಕ್ಕೂ ಗಲಾಟೆ, ಶಾಂತಿಗೆ ಭಂಗ ಬರದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 11 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಹಬ್ಬದ ಅಂಗವಾಗಿ ಒಟ್ಟು 20 ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗುವುದು. ಗಣೇಶ ವಿಸರ್ಜನೆಗೆ ಮದಲಗಟ್ಟಿ ಬಳಿಯ ನದಿ ದಡದಲ್ಲಿ ಸ್ಥಳ ಪರಿಶೀಲನೆ ಮಾಡಿ, ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ತಹಸೀಲ್ದಾರ್ ಜಿ.ಸಂತೋಷಕುಮಾರ, ತಾಪಂ ಇಒ ಉಮೇಶ, ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಮಾತನಾಡಿದರು.
ಅಗ್ನಿಶಾಮಕ ಠಾಣೆಯ ನರಸಪ್ಪ, ಹಡಗಲಿ ಪಿಎಸ್‌ಐ ವಿಜಯ ಕೃಷ್ಣ, ಇಟಗಿ ಪಿಎಸ್ಐ ನಾರಾಯಣ, ಹಿರೇಹಡಗಲಿ ಪಿಎಸ್ಐ ಭರತರಡ್ಡಿ, ಅರಪಾಧ ವಿಭಾಗ ಪಿಎಸ್ಐ ವಾಸು ಸೇರಿದಂತೆ ಇತರರಿದ್ದರು.