ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯಲ್ಲಿ ಸಾರಿಗೆ ನಿಯಮ ಉಲ್ಲಂಘಿಸಿ, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವ ವಾಹನಗಳ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಖಾಸಗಿ ವಾಹನಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇಂತಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಪೋಟೋ ಸಹಿತ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ, ನಿಯಮಾನುಸಾರ ದಂಡ ವಿಧಿಸಿ, ಪದೇ ಪದೇ ಇದನ್ನು ಪುನಾರಾವರ್ತನೆ ಮಾಡುತ್ತಿರುವ ವಾಹನಗಳ ಲೈಸೆನ್ಸ್ ರದ್ದುಗೊಳಿಸುವಂತೆ ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಟ್ಯಾಕ್ಸಿ, ಆಟೋ ಮತ್ತು ಬಾಡಿಗೆ ಬೈಕ್‌ಗಳ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ನಿಲ್ದಾಣ ಮತ್ತು ಟ್ಯಾಕ್ಸಿಗಳ ನಿಲ್ದಾಣದ ಕುರಿತಂತೆ ಹಾಗೂ ರಿಕ್ಷಾಗಳ ಸಂಚಾರ ವ್ಯಾಪ್ತಿ ವಿಸ್ತರಣೆಯ ಕುರಿತಂತೆ ಸಂಬಂಧಪಟ್ಟ ತಾಲೂಕುಗಳ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತಹಶೀಲ್ದಾರಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಷಿ ಸಂಘಟನೆಗಳು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ಕಳುಹಿಸಿದಲ್ಲಿ ಈ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲಾಡಳಿತ ರಿಕ್ಷಾ ಮತ್ತು ಆಟೋ ಚಾಲಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಎರಡೂ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಗೋವಾದಲ್ಲಿ ಜಿಲ್ಲೆಯ ವಾಹನಗಳ ವಾಯುಮಾಲಿನ್ಯ ತಪಾಸಣಾ ಪತ್ರಕ್ಕೆ ಮಾನ್ಯತೆ ನೀಡದ ಬಗ್ಗೆ ಗೋವಾದ ಜಿಲ್ಲಾಧಿಕಾರಿ ಮತ್ತು ಎಸ್ಪಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಕುರಿತಂತೆ ರಾಜ್ಯದ ಸಾರಿಗೆ ಆಯುಕ್ತಾಲಯದ ಗಮನಕ್ಕೆ ತರಲಾಗುವುದು, ಟ್ಯಾಕ್ಸಿಗಳಲ್ಲಿ ಅಳವಡಿಸಲಾಗುತ್ತಿರುವ ಪ್ಯಾನಿಕ್ ಬಟನ್ ಕಾರ್ಯನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ 400ಕ್ಕೂ ಅಧಿಕ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ನೀಡಿದ ಜಿಲ್ಲಾಧಿಕಾರಿಗಳು, ದುರ್ಗಮ ಪ್ರದೇಶದಲ್ಲಿ ಮತ್ತು ಈಗಾಗಲೇ ಗುರುತಿಸಲಾಗಿರುವ ಬ್ಲಾಕ್‌ಸ್ಪಾಟ್ ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಸೂಚನೆ ನೀಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಭೆಯಲ್ಲಿ ಭಾಗವಹಿಸಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು, ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ 5 ವರ್ಷಗಳ ವರೆಗೆ ಸ್ಥಗಿತಗೊಳಿಸಬೇಕು, ಎಲ್.ಪಿ.ಜಿ ಮತ್ತು ಸಿ.ಎನ್.ಜಿ ವಾಹನಗಳಿಗೆ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಶ್ಯಕತೆ ಬಗ್ಗೆ, ಪರ್ಮಿಟ್ ವ್ಯಾಪ್ತಿ ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ, ಬಾಡಿಗೆ ಬೈಕ್ ನಿಷೇಧಿಸುವುದು ಸೇರಿದಂತೆ ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಾನ್ ಬಿ. ಮಿಸ್ಕಿತ್, ಮಲ್ಲಿಕಾರ್ಜುನಪ್ಪ ಕೊಪ್ಪರದ, ರವೀಂದ್ರ ಕೆ.ಎಸ್., ಅವಿನಾಶ ಕಾವೇರಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು ಉಪಸ್ಥಿತರಿದ್ದರು.