ರಾಜಕೀಯದಲ್ಲಿ ಸುಳ್ಳು ರಾರಾಜಿಸುತ್ತಿದೆ

| Published : May 03 2024, 01:06 AM IST

ಸಾರಾಂಶ

ನಾವು ಚುನಾಯಿತರಾಗಿ ಬಂದರೆ ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುವವರಿಗೆ ಈ ಬಾರಿ ಚುನಾವಣೆಯಲ್ಲಿ ಒಂದು ಸ್ಪಷ್ಟವಾದ ಉತ್ತರವನ್ನು ಮತದಾನದ ಮೂಲಕ ಎಲ್ಲರೂ ನೀಡಬೇಕಿದೆ

ಗದಗ: ರಾಜಕೀಯದಲ್ಲಿ ಇಂದು ಸತ್ಯಕ್ಕಿಂತ ಸುಳ್ಳೇ ಹೆಚ್ಚು ರಾರಾಜಿಸುತ್ತಿದೆ, ಇದು ಅತ್ಯಂತ ಬೇಸರದ ಸಂಗತಿ. ರಾಜಕೀಯ ವಸ್ತುನಿಷ್ಠವಾಗಿರಬೇಕು. ರಾಜಕೀಯ ಬದುಕಿನ ವಿಷಯಗಳ ಮೇಲೆ ನಡೆಯಬೇಕು. ಜಾತಿಗಳ ಆಧಾರದಲ್ಲಿ ಅಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಅವರು ಗುರುವಾರ ಗದಗ ನಗರದ ಕೆ.ಎಚ್. ಪಾಟೀಲ‌ ಸಭಾಭವನದಲ್ಲಿ ದಸಂಸ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಕಲಾ ಮಂಡಳಿ, ಜಾಗೃತ ಕರ್ನಾಟಕ ಸಹಯೋಗದಲ್ಲಿ ತೆರಿಗೆ, ನೀರಾವರಿ, ಬರ ಪರಿಹಾರ, ಕರ್ನಾಟಕಕ್ಕೆ ಆದ ದ್ರೋಹ, ವಂಚನೆ ಏನು? ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂವಿಧಾನದ ಮೂಲ ಆಶಯವೇ ಸಮ ಸಮಾಜ ನಿರ್ಮಾಣವಾಗಿದೆ. ಆದರೆ ನಾವು ಚುನಾಯಿತರಾಗಿ ಬಂದರೆ ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುವವರಿಗೆ ಈ ಬಾರಿ ಚುನಾವಣೆಯಲ್ಲಿ ಒಂದು ಸ್ಪಷ್ಟವಾದ ಉತ್ತರವನ್ನು ಮತದಾನದ ಮೂಲಕ ಎಲ್ಲರೂ ನೀಡಬೇಕಿದೆ. ಬಡವರಿಗೆ ಸೌಲಭ್ಯ ನೀಡಿದರೆ ಇವರಿಗೆ ತೊಂದರೆಯಾಗುತ್ತದೆ. ಇವರು ನಿತ್ಯವೂ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಮತ್ತೆ ಶ್ರೇಣೀಕೃತ ವ್ಯವಸ್ಥೆಗಿಂತಲೂ ಅಪಾಯಕಾರಿ ನಿಲುವುಗಳು ಗೋಚರವಾಗುತ್ತಿವೆ.

ಪ್ರತಿ ಹಂತದಲ್ಲಿ ಪ್ರಜಾಪ್ರಭುತ್ವ ನಮಗೆ ಬೇಕು. ಆದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿ ಪೆಟ್ಟನ್ನು ನೀಡಿ, ತಮ್ಮ ದಮನಕಾರಿ ಆಲೋಚನೆಗಳು, ಪ್ರವೃತ್ತಿಗಳಿಂದಾಗಿ ಹಿಂದುಳಿದ, ಬಡವ ದಲಿತ ಹೀಗೆ ಸದಾ ಸಮಸ್ಯೆಯಲ್ಲಿಯೇ ಇರುವ ಸಮುದಾಯಗಳನ್ನು ಮತ್ತಷ್ಟು ಸಮಸ್ಯೆಗೆ ಸಿಕ್ಕಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ನಾವು ನೀವೆಲ್ಲ ಸೇರಿ ಬಲವಾಗಿ ಖಂಡಿಸಬೇಕು. ಮತದಾನ ಮೂಲಕ ಸಂದೇಶ ರವಾನಿಸಿ ಅವರನ್ನು ಅಧಿಕಾರದಿಂದೆ ಕೆಳಗಿಸಬೇಕು ಎಂದರು.

ಆನಂತರ ಪಿಪಿಟಿ ಮೂಲಕ ರಾಜ್ಯಕ್ಕೆ ತೆರಿಗೆಯಲ್ಲಿ, ಬರ ಪರಿಹಾರದಲ್ಲಿ ಜಿಎಸ್ಟಿಯಲ್ಲಿ, ಪೆಟ್ರೋಲ್, ಡೀಸೆಲ್, ತೆರಿಗೆಯಲ್ಲಿ ಹೀಗೆ ಉತ್ತರ ರಾಜ್ಯಗಳಿಗೆ ಹೇಗೆ ಅನುಕೂಲ ಮಾಡುತ್ತಿದ್ದಾರೆ? ದಕ್ಷಿಣ ರಾಜ್ಯಗಳಿಗೆ ಎಷ್ಟು ಅನ್ಯಾಯ ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಪ್ರತಿಯೊಂದು ಅಂಕಿ-ಅಂಶಗಳ ಸಹಿತ ಸುದೀರ್ಘವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಾನೂನು‌ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಮಾಡಿದ‌ ಅನ್ಯಾಯವನ್ನು ಸುಪ್ರೀಂ ಕೋರ್ಟ್‌ಗೆ ಹೋಗಿ ಪಡೆಯುವಲ್ಲಿ ಕೃಷ್ಣ ಬೈರೇಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ. ನಾವು ಕೊಡುವ ತೆರಿಗೆ ₹100 ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ₹13 ಮರಳಿ ಕೊಡುತ್ತದೆ. ನೀತಿ ಆಯೋಗದ ಮೂಲಕ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ, ತಾನು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೇನೆ ಎನ್ನುವುದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಗೊತ್ತಿತ್ತು. ಹಾಗಾಗಿ ಅವರು ಬಹಿರಂಗ ಚರ್ಚೆಗೆ ಬರಲಿಲ್ಲ‌ ಎಂದು‌ ಆಕ್ರೋಶ ವ್ಯಕ್ತ ಪಡಿಸಿದರು.

ದಲಿತ ಕಲಾ ಮಂಡಳಿಯ ಷರೀಫ ಬಿಳಿಯಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ತೆಗೆದು ಹಾಕಲು ಬರುತ್ತಿದ್ದಾರೆ, ಅದಕ್ಕೆ ಅವಕಾಶ ನೀಡಬೇಡಿ. ಸಂವಿಧಾನ ಉಳಿಸೋಣ ನಾವೆಲ್ಲ ಎಂದರು.

ರೈತ ಸಂಘದ ಜೆ.ಎಂ. ವೀರಸಂಗಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಚೌಡರಡ್ಡಿ, ಜಾಗ್ರತ ಕರ್ನಾಟಕದ ರಾಜಶೇಖರ‌ ಅಕ್ಕಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಉಪಸ್ಥಿತರಿದ್ದರು. ಮುತ್ತು ಬಿಳೆಯಲಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತ ಸಂಘ, ದಲಿತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಪಾಲ್ಗೊಂಡಿದ್ದರು.