ಸಾರಾಂಶ
ನಳೀಲು ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಸುಧೀರ್ ಕಟ್ಟಪುಣಿ, ವೆಂಕಟರಮಣ ಆಚಾರ್ಯ, ಗೋಪಾಲ ಆಚಾರ್ಯ, ಪದ್ಮನಾಭ ಶೇರಿಗಾರ್ ಅರಿಯಡ್ಕ ಅವರನ್ನು ದೇವಳದ ವತಿಯಿಂದ ಸ್ವಾಮೀಜಿ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ದೇವಸ್ಥಾನ ಕಟ್ಟಿ ಪ್ರತಿಷ್ಠಾದಿ ಉತ್ಸವಗಳನ್ನು ಮಾಡುವುದರ ಹಿಂದೆ ಆತ್ಮ ಸಾಕ್ಷಾತ್ಕಾರದ ಒಳಮರ್ಮವಿದೆ. ಮನುಷ್ಯ ತನ್ನ ಬದುಕು ಹಸನು ಮಾಡಿಕೊಳ್ಳಲು ಧರ್ಮದ ಹಾದಿಯಲ್ಲಿ ನಡೆಯಬೇಕು. ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕೂಡ ಧರ್ಮಜೀವನಕ್ಕೆ ಒಂದು ಮೆಟ್ಟಿಲಾಗಿ ಫಲ ನೀಡುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.ಅವರು ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ೩ನೇ ದಿನದ ಧರ್ಮಸಭೆಯಲ್ಲಿ ಸೋಮವಾರ ರಾತ್ರಿ ಆಶೀರ್ವಚನ ನೀಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿಮಾತನಾಡಿ, ನಾಗನಿಗೆ ೨ ನಾಲಿಗೆಯಿದ್ದರೂ, ಮಾತು ಒಂದೇ. ಮನುಷ್ಯರಿಗೆ ನಾಲಿಗೆ ಒಂದೇ ಇದ್ದರೂ ಮಾತು ಹಲವು ಎಂದಾಗಿದೆ. ಇಂಥ ಕಾಲಘಟ್ಟದಲ್ಲಿ ಧರ್ಮಕ್ಷೇತ್ರದ ಬ್ರಹ್ಮಕಲಶದಂಥ ಪುಣ್ಯ ಕಾರ್ಯವನ್ನು ಸಂತೋಷ್ ರೈ ಅವರು ಎಲ್ಲರನ್ನು ಸೇರಿಸಿಕೊಂಡು ಅದ್ಭುತವಾಗಿ ಮಾಡಿದ್ದಾರೆ ಎಂದರು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ, ಯುವಜನಾಂಗ ಹೆಚ್ಚೆಚ್ಚು ದೇವಸ್ಥಾನಗಳಿಗೆ ಬಂದು ಹೋಗುವ ಪದ್ಧತಿ ರೂಢಿ ಮಾಡಿಕೊಳ್ಳಬೇಕು ಎಂದರು.ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮದ ವಿರುದ್ಧ ವ್ಯಾಖ್ಯಾನಗಳು ನಡೆಯುತ್ತಿರುವ ದಿನಮಾನಗಳಲ್ಲಿ ಹಿಂದೂ ಸಮಾಜ ಜಾಗೃತಾವಸ್ಥೆಯಲ್ಲಿರಬೇಕು. ಧರ್ಮಕ್ಕಾಗಿ ತ್ಯಾಗ ಮನೋಭಾವದಿಂದ ಕೆಲಸ ಮಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.
ಕೆಯ್ಯೂರು ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ, ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ, ಪ್ರಮುಖರಾದ ಹರಿಕೃಷ್ಣ ಭಟ್, ರಘುನಾಥ ರೈ ನಡುಕೂಟೇಲು ಶುಭ ಹಾರೈಸಿದರು.ಸನ್ಮಾನ: ನಳೀಲು ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಸುಧೀರ್ ಕಟ್ಟಪುಣಿ, ವೆಂಕಟರಮಣ ಆಚಾರ್ಯ, ಗೋಪಾಲ ಆಚಾರ್ಯ, ಪದ್ಮನಾಭ ಶೇರಿಗಾರ್ ಅರಿಯಡ್ಕ ಅವರನ್ನು ದೇವಳದ ವತಿಯಿಂದ ಸ್ವಾಮೀಜಿ ಸನ್ಮಾನಿಸಿದರು. ನಳೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ವಿಜೇತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಾವತಿ ರೈ ವಂದಿಸಿದರು.