ನರಸಿಂಹರಾಜಪುರಪ್ರತಿಯೊಬ್ಬರೂ ಶ್ರದ್ಧೆಯಿಂದ ದೇವರ ಸ್ಮರಣೆ ಮಾಡುತ್ತಾ ಬಂದರೆ ಜೀವನ ಸುಖಕರವಾಗಲಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರವಿಂದ ಸೋಮಯಾಜಿ ತಿಳಿಸಿದರು.
- ಗುಡ್ಡೇಹಳ್ಳ ಶಾಲಾ ಆವರಣದಲ್ಲಿ ಧ.ಗ್ರಾ.ಯೋಜನೆಯಿಂದ ಸಾಮೂಹಿಕ ಸತ್ಯನಾರಯಣ ಪೂಜೆ ಹಾಗೂ ಧಾರ್ಮಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬರೂ ಶ್ರದ್ಧೆಯಿಂದ ದೇವರ ಸ್ಮರಣೆ ಮಾಡುತ್ತಾ ಬಂದರೆ ಜೀವನ ಸುಖಕರವಾಗಲಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರವಿಂದ ಸೋಮಯಾಜಿ ತಿಳಿಸಿದರು.
ಗುರುವಾರ ಗುಡ್ಡೇಹಳ್ಳ ಶಾಲಾ ಆವರಣದ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಎಚ್.ಕೈಮರ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. 84 ಲಕ್ಷ ಜೀವಿಗಳನ್ನು ದಾಟಿ ಮಾನವ ಜೀವಕ್ಕೆ ಬಂದಿದ್ದೇವೆ. ಆದ್ದರಿಂದ ಮನುಷ್ಯರು ಸತ್ಸಂಗ ಮಾಡಬೇಕು. ತಂದೆ, ತಾಯಿಯರನ್ನು ಚೆನ್ನಾಗಿ ನೋಡಕೊಳ್ಳಬೇಕು. ಕೇವಲ ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯದೆ ಸುಖ ಬಂದಾಗಲೂ ದೇವರ ಸ್ಮರಣೆ ಮಾಡಬೇಕು ಎಂದು ಸಲಹೆ ನೀಡಿದರು.ಅತಿಥಿಯಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ ಹಾಗೂ ಎನ್.ಆರ್ ಪುರ ತಾಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ 2240 ಸ್ವಸಹಾಯ ಸಂಘಗಳಿವೆ. 15,900 ಸದಸ್ಯರಿದ್ದಾರೆ.ಈ ಹಿಂದೆ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ,ಬಾಳೆಹೊನ್ನೂರು ಸೇರಿತ್ತು.ನಿರ್ವಹಣೆ ಮಾಡುವುದು ಕಷ್ಟವಾಗಿದ್ದರಿಂದ ಈಗ ಶೃಂಗೇರಿ ,ಬಾಳೆಹೊನ್ನೂರು ಪ್ರತ್ಯೇಕವಾಗಿದೆ. 7 ವಲಯಗಳು ಕಾರ್ಯ ನಿರ್ವಹಿಸುತ್ತಿದೆ. ಶೇಖಡ 100 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದ್ದೇವೆ.ಕೇವಲ ಸಾಲ ಮಾತ್ರ ನೀಡುತ್ತಿಲ್ಲ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೇವೆ .ಮನೆಯಲ್ಲಿ ಧಾರ್ಮಿಕ ಕಾರ್ಯ ಮಾಡುವುದರ ಜೊತೆಗೆ ಸಾಮೂಹಿಕವಾಗಿಯೂ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇವೆ.ಈಗಾಗಲೇ 2 ವಲಯಗಳಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮುಕ್ತಾಯವಾಗಿದೆ.ಸಂಘದ ಸದಸ್ಯರಿಗೆ ಸುಲಭದಲ್ಲಿ ಸಾಲ ನೀಡುವ ವ್ಯವಸ್ಥೆ ಇದೆ.ಸದಸ್ಯರು ಪಡೆದ ಸಾಲವನ್ನು ಆದಾಯ ಬರುವುದಕ್ಕೆ ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪುರೋಹಿತರಾದ ಪ್ರಕಾಶ್ ಭಟ್ ಧಾರ್ಮಿಕ ಉಪನ್ಯಾಸ ನೀಡಿ,ಶಂಕರಾಚಾರ್ಯರು ಹೇಳಿದಂತೆ ಸತ್ಸಂಗ ಮಾಡಬೇಕು.ಜನನ ಹಾಗೂ ಮರಣದ ಮದ್ಯೆ ಶ್ರದ್ದೆಯಿಂದ ದೇವರನ್ನು ನೆನೆಯುವ ಕಾರ್ಯ ಮಾಡಬೇಕು.ನಮಗೆ ಗೊತ್ತಿಲ್ಲದಂತೆ ಅನೇಕ ಬಾರಿ ಪಾಪಗಳನ್ನು ಮಾಡುತ್ತೇವೆ.ಪಾಪ ಕಾರ್ಯಗಳನ್ನು ಬಿಟ್ಟು ಸಜ್ಜನರ ಜೊತೆ ಸೇರಿ ಸಮಾಜಕ್ಕೆ ಉಪಯೋಗವಾಗುವ ಒಳ್ಳೇ ಕಾರ್ಯ ಮಾಡಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಮಾತನಾಡಿ, ನಮ್ಮ ಮನಸ್ಸಿನ ಒಳಗೆ ಇರುವ ಕೊಳಕನ್ನು ಮೊದಲು ತೆಗೆಯಬೇಕು.ಸ್ಥಾರ್ಥ ಬಿಡಬೇಕು. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ.ಅದನ್ನು ಗುರುತಿಸಿ ಸಮಾಜದ ಯಾರಿಗೂ ತೊಂದರೆ ನೀಡದೆ ಬದುಕಬೇಕು ಎಂದರು. ಗುಡ್ಡೇಹಳ್ಳ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆರ್. ನಾಗರಾಜ್, ಮಾವಿನ ಮನೆ ತಿಮ್ಮಣ್ಣ ಮಾತನಾಡಿದರು.
ಸಭೆಯಲ್ಲಿ ಕಾನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮನೋಹರ್, ಉಮಾದೇವಿ, ನಾಗರತ್ನ, ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಟಿ. ನಾಗರತ್ನ,ಜೇಸಿ ಅಧ್ಯಕ್ಷ ಆದರ್ಶ ಬಿ ಗೌಡ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಂದೀಪಕುಮಾರ್, ವಿದ್ಯಾ ಗಣಪತಿ ಸಂಘದ ಅಧ್ಯಕ್ಷ ಶ್ರೀನಾಥ್, ಕ.ರ.ವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ವಿವಿಧ ಒಕ್ಕೂಟಗಳ ಅಧ್ಯಕ್ಷರುಗಳಾದ ವಿಜಯಕುಮಾರ್,ಲಕ್ಷ್ಮಣ,ಶೈನಾ, ಗ್ರಾಮದ ಮುಖಂಡ ಕಾಸನ ಚಂದ್ರಶೇಖರ್, ಬಿ.ಎಚ್.ಕೈಮರ ವಲಯ ಮೇಲ್ವೀಚಾರಕ ತೀರ್ಥೇಶ್, ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣ, ಸಿಬಿ, ಮೇರಿ, ಮಂಜುಳಾ, ಶೈನಿ, ಅಶ್ವಿನಿ, ಶೌರ್ಯ ವಿಪತ್ತು ತಂಡ ಹಾಗೂ ನವ ಜೀವನ ಸಮಿತಿಯ ಸದಸ್ಯರು ಇದ್ದರು.ಸುನೀಲ್ ಸ್ವಾಗತಿಸಿದರು. ತೀರ್ಥೇಶ್ ಕಾರ್ಯಕ್ರಮ ನಿರೂಪಿಸಿದರು.