ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

| Published : Oct 27 2025, 12:30 AM IST

ಸಾರಾಂಶ

ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಶನಿವಾರವೂ ಧಾರಾಕಾರ ಮಳೆ ಸುರಿದಿದ್ದು, ಹೊಲಗಳಲ್ಲಿ ನೀರು ನಿಂತು ರೈತರ ಬೆಳೆಗಳಿಗೆ ಹಾನಿಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಗುಡುಗು–ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದೆ. ಇನ್ನು ಶುಕ್ರವಾರ ಒಂದೇ ದಿನ 16.3 ಮಿ.ಮೀ. ಮಳೆ ದಾಖಲಾಗಿದೆ. ಅತಿವೃಷ್ಠಿಯ ಪರಿಣಾಮವಾಗಿ ತಾಲೂಕಿನ ಹಲವು ಭಾಗಗಳಲ್ಲಿ ಭತ್ತ ಹೊಲಗಳು ನೀರಿನಲ್ಲಿ ಮುಳುಗಿದ್ದು, ಕಟಾವಿಗೆ ಬಂದಿದ್ದ ಧಾನ್ಯ ನೆಲಕ್ಕಚ್ಚಿ ಮೊಳಕೆ ಬಂದಿದ್ದು ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ.

ಮಳೆಯಿಂದಾಗಿ ಹಂಪಾದೇವನಹಳ್ಳಿ, ಜವುಕುನಲ್ಲಿ ತಲಾ ಒಂದು ಹಾಗೂ ರಾಮಸಾಗರ ಗ್ರಾಮಗಳಲ್ಲಿ 2 ಸೇರಿ ಒಟ್ಟಾರೆ ನಾಲ್ಕು ಕಚ್ಚಾ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ಹಂಪಾದೇವನಹಳ್ಳಿಯೊಂದರಲ್ಲಿ ಹಾಗೂ ಜವುಕು ಗ್ರಾಮದಲ್ಲೊಂದರಲ್ಲಿ ಗೋಡೆ ಕುಸಿತ ಸಂಭವಿಸಿದ್ದು, ರಾಮಸಾಗರ ಗ್ರಾಮದ ಲಕ್ಷ್ಮಮ್ಮ ಹಾಗೂ ಚಂದ್ರಶೇಖರ ಅವರ ಮನೆಗಳು ಗಂಭೀರ ಹಾನಿಗೊಳಗಾಗಿವೆ.

ರಾಮಸಾಗರದ ಲಕ್ಷ್ಮಮ್ಮ ಅವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಕುಟುಂಬ ಸದಸ್ಯರು ಊಟಕ್ಕೆ ಕುಳಿತಿದ್ದ ವೇಳೆ ಏಕಾಏಕಿ ಗೋಡೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯಿಂದಾಗಿ ಹಲವೆಡೆ ರಸ್ತೆಗಳು ಕೃಷಿ ಹೊಂಡಗಳು ಹಾಗೂ ಕೆಸರು ಗದ್ದೆಯಂತಾಗಿದ್ದು ವಾಹನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗಿದೆ.