ಹಿರಿಯರ ಜೀವನಾನುಭವ ಯುವಜನತೆಗೆ ಪ್ರೇರಣೆ: ಶಾಸಕ ಎಚ್.ಆರ್.ಗವಿಯಪ್ಪ

| Published : Oct 11 2025, 12:03 AM IST

ಹಿರಿಯರ ಜೀವನಾನುಭವ ಯುವಜನತೆಗೆ ಪ್ರೇರಣೆ: ಶಾಸಕ ಎಚ್.ಆರ್.ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕ ನಿಷ್ಠೆ, ವೃತ್ತಿ ಧರ್ಮ ಪಾಲನೆ ಸೇರಿದಂತೆ ಅವರ ಜೀವನಾನುಭವಗಳು ಯುವಜನತೆಯಲ್ಲಿ ಪ್ರೇರಣೆ ಮೂಡಿಸಲಿವೆ

ಹೊಸಪೇಟೆ: ಹಿರಿಯರ ಜೀವನ ಶೈಲಿ, ಶಿಸ್ತುಬದ್ಧ ನಡವಳಿಕೆ, ಅಹಾರ ಪದ್ಧತಿ, ಆರೋಗ್ಯ ಕಾಳಜಿ, ಕಾಯಕ ನಿಷ್ಠೆ, ವೃತ್ತಿ ಧರ್ಮ ಪಾಲನೆ ಸೇರಿದಂತೆ ಅವರ ಜೀವನಾನುಭವಗಳು ಯುವಜನತೆಯಲ್ಲಿ ಪ್ರೇರಣೆ ಮೂಡಿಸಲಿವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ಶ್ರೀಸಾಯಿಲೀಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಪ್ರತಿಯೊಬ್ಬರು ನಿಮ್ಮ ಕುಟುಂಬದ ಹಿರಿಯರನ್ನು ಗೌರವಿಸಬೇಕು. ಅವರೊಂದಿಗೆ ಉತ್ತಮ ಸಂಬಂಧ ಹೊಂದಬೇಕು. ಹಿರಿಯರ ಜೀವನದಲ್ಲಿ ನಡೆದ ಅನೇಕ ಘಟನೆಗಳು ನಿಮ್ಮ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿದಾಯಕವಾಗಿರಲಿವೆ. ಈಗಾಗಲೇ ಹೊಸಪೇಟೆ ನಗರದ ಅಭಿವೃದ್ಧಿಗೆ ಪ್ರತಿ ವಾರ್ಡ್ ನಲ್ಲಿ ಸಿಸಿ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ನೀಡಲು ಸುಮಾರು 70 ಕೋಟಿ ರು. ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ. ನಗರದ ಸುಂದರೀಕರಣಕ್ಕೆ ಗುಣಮಟ್ಟದ ಕಾಮಗಾರಿ ಕಾರ್ಯ ಅಗತ್ಯವಿದೆ. ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ಸ್ಥಳೀಯ ಹಿರಿಯ ನಾಗರಿಕರ ಸಲಹೆ ಸಹಕಾರ ಅತ್ಯಗತ್ಯವಿದೆ. ಹೊಸಪೇಟೆ ನಗರದಲ್ಲಿರುವ ಹಿರಿಯ ನಾಗರಿಕರು ನಗರದ ಅಭಿವೃದ್ಧಿ ವಿಚಾರಕ್ಕೆ ತಾವುಗಳು ಮುಕ್ತವಾಗಿ ಸಲಹೆಗಳನ್ನು ನೀಡಬಹುದು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಹಿರಿಯ ನಾಗರಿಕರಿಗಾಗಿ ವಿಶೇಷ ಕಾಯ್ದೆಗಳಿವೆ. ಅವುಗಳ ಪ್ರಕಾರ ಹಿರಿಯ ನಾಗರಿಕರ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡಲು ಒತ್ತಾಯ ಮಾಡುವುದು. ಮನೆಯಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಸಿ ಕಿರುಕುಳಗಳನ್ನು ನೀಡುವುದು. ವೃದ್ಧಾಶ್ರಮಕ್ಕೆ ತೆರಳುವಂತೆ ಒತ್ತಾಯಿಸಿದಲ್ಲಿ ಸ್ಥಳೀಯ ಸಹಾಯಕ ಆಯುಕ್ತರಿಗೆ ದೂರು ದಾಖಲಿಸಬಹುದಾಗಿದೆ. ಹಿರಿಯ ನಾಗರಿಕರನ್ನು ಸಮಾಜ ಮತ್ತು ಕುಟುಂಬದವರು ಗೌರವಿಸಬೇಕು ಎಂದರು.

ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಸಂಚಾಲಕ ಮಾನಸ ಹಿರಿಯ ನಾಗರಿಕರನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಈಚೇಗೆ ನಡೆದ ವಿಶ್ವ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಸ್.ಶ್ವೇತಾ, ಜಿಪಂ ಯೋಜನಾಧಿಕಾರಿ ಮೌನೇಶ್, ತಾಪಂ ಇಒ ಆಲಂಪಾಷ್, ತಾಲೂಕು ಕಾನೂನು ಸೇವಾ ಸಮಿತಿ ವಕೀಲರಾದ ಶ್ವೇತಾಂಬರಿ ಮತ್ತು ಸುಮಂಗಳಮ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಅಂಗಡಿ, ಹಿರಿಯ ನಾಗರಿಕರ ಜಿಲ್ಲಾ ಕಲ್ಯಾಣಾಧಿಕಾರಿ ರಾಮಾಂಜನೇಯ ಸೇರಿದಂತೆ ತಾಲೂಕಿನ ಎಲ್ಲಾ ಅಂಗನವಾಡಿ ಶಿಕ್ಷಕಿಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಭಾಗವಹಿಸಿದ್ದರು.