ಸಾರಾಂಶ
ಸೊರಬ ತಾಲೂಕಿನ ಕಮರೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿ ಕೊಂಡಿದ್ದ ೧೭ನೇ ವರ್ಷದೊಳಗಿನ ಕಸಬಾ-ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಂತ ವೈದ್ಯ ಡಾ.ಹೆಚ್.ಇ.ಜ್ಞಾನೇಶ್ ಕ್ರೀಡಾಜ್ಯೋತಿ ಸ್ಥಾಪಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ಕ್ರೀಡಾ ಚಟುವಟಿಕೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಯಾವುದೇ ಕ್ರೀಡೆಯಾಗಿರಲಿ ಅದರಲ್ಲಿ ಮಗ್ನರಾಗಿ ಪಾಲ್ಗೊಳ್ಳುವುದರಿಂದ ಆಯುಸ್ಸು ವೃದ್ಧಿಯಾಗುತ್ತದೆ ಎಂದು ದಂತ ವೈದ್ಯ, ಸಮಾಜ ಸೇವಕ ಡಾ.ಹೆಚ್.ಇ.ಜ್ಞಾನೇಶ್ ನುಡಿದರು.ಗುರುವಾರ ತಾಲೂಕಿನ ಕಮರೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ೧೭ನೇ ವರ್ಷ ದೊಳಗಿನ ಕಸಬಾ-ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ಥಾಪಿಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಹೆಚ್.ಗಣಪತಿ ಹುಲ್ತಿಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದರು.ಇನ್ನು, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹಾಗೂ ದೈಹಿಕ ಬೆಳವಣಿಗೆಗೆ ಬೇಕಾಗುವಂತಹ ಸೌಲಭ್ಯಗಳನ್ನು ಒದಗಿಸುವಲ್ಲಿ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಮಾದರಿಯಾಗಿದ್ದಾರೆ ಎಂದೂ ಶ್ಲಾಘಿಸಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಬೆನ್ನೂರು ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ ರವಿ ಮಾತನಾಡಿ, ಗ್ರಾಮೀಣ ಭಾಗದ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಮಕ್ಕಳ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿಯಾಗಿದ್ದು. ಇದರಿಂದ ವಿದ್ಯಾರ್ಥಿಗಳ ನಡುವೆ ಸ್ನೇಹ ಬಾಂಧವ್ಯ ಬೆಸೆ ಯುತ್ತದೆ ಎಂದರು.ಗ್ರಾ.ಪಂ.ಮಾಜಿ ಅಧ್ಯಕ್ಷ ಬೆನ್ನೂರು ಮಾರ್ಯಪ್ಪ ಉಪಸ್ಥಿತರಿದ್ದು, ಮಾತನಾಡಿದರು. ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಪರಮೇಶ್ ಮಣ್ಣತ್ತಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ್ ಒಡೆಯರ್, ಗ್ರಾಪಂ ಸದಸ್ಯ ಎಂ.ಕೆ.ದೇವರಾಜ್, ಮುಖ್ಯ ಶಿಕ್ಷಕ ಹೆಚ್.ಕೆ. ಚಿಕ್ಕಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಮಾಜಿ ಗ್ರಾಪಂ ಅಧ್ಯಕ್ಷ ಜಯಶೀಲಗೌಡ, ತಾಪಂ ಮಾಜಿ ಸದಸ್ಯ ಸುನಿಲ್ ಗೌಡ, ಪ್ರದೀಪ್ ಬಾಡದಬೈಲು, ಚಂದ್ರು ನಾಯ್ಕ ಭದ್ರಾಪುರ, ವಸಂತ, ನಾಗೇಶ್, ತಿಮ್ಮಪ್ಪ, ಸೇರಿದಂತೆ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.