ಮೂವರಿಗೂ ಜೀವಾವಧಿ ಶಿಕ್ಷೆ, ತಲಾ 38 ಸಾವಿರ ದಂಡ, ತೀರ್ಪು

| Published : Oct 11 2024, 11:49 PM IST

ಸಾರಾಂಶ

ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಗೆ ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣರಾದ ಅಪರಾಧಿ ಪತಿ, ಆತನ ತಂದೆ, ತಾಯಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹38 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಗೆ ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣರಾದ ಅಪರಾಧಿ ಪತಿ, ಆತನ ತಂದೆ, ತಾಯಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹38 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಹೊನ್ನಾಳಿ ತಾ. ಚಿಕ್ಕಬಾಸೂರು ಗ್ರಾಮದ ಗಿರಿಧರ(32 ವರ್ಷ), ಈತನ ತಂದೆ ಹಾಲಪ್ಪ ನಾಯ್ಕ(58), ತಾಯಿ ಲಲಿತಾಬಾಯಿ ಹಾಲಪ್ಪ ನಾಯ್ಕ(50) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಡಿ.ಸುಮಾ ಗಿರಿಧರ(24 ವರ್ಷ) ತೀವ್ರ ಸುಟ್ಟ ಗಾಯಗಳಿಂದಾಗಿ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಪಾಪಿಗಳು

ಐದು ವರ್ಷಗಳ ಹಿಂದೆ ಚಿಕ್ಕಬಾಸೂರು ಗ್ರಾಮದ ಗಿರಿಧನರನಿಗೆ ಸುಮಾ ಅವರ ಜತೆ ಮದುವೆ ಮಾಡಲಾಗಿತ್ತು. ಮದುವೆ ಕಾಲಕ್ಕೆ ಆಕೆಯ ತಂದೆ 6 ತೊಲ ಚಿನ್ನದ ಆಭರಣ, ₹40 ಸಾವಿರ ನಗದು, ಒಂದು ಬೈಕ್ ಕೊಟ್ಟು ಮದುವೆ ಮಾಡಿದ್ದರು. ಆರಂಭದಲ್ಲಿ 3 ವರ್ಷ ಗಂಡ ಗಿರಿಧರ, ಮಾವ ಹಾಲಪ್ಪ ನಾಯ್ಕ, ಅತ್ತೆ ಲಲಿತಾಬಾಯಿ ಸೊಸೆ ಸುಮಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದನು.

ಗಿರಿಧರ 6 ತೊಲ ಚಿನ್ನದ ಆಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ. ತನ್ನ ತಂದೆ ನೀಡಿದ್ದ ಚಿನ್ನವನ್ನು ಬಿಡಿಸಿಕೊಡುವಂತೆ ಸುಮ ಕೇಳಿದ್ದರಿಂದ ಪತಿ ಗಿರಿಧರ, ಮಾವ ಹಾಲಪ್ಪ ನಾಯ್ಕ, ಅತ್ತೆ ಲಲಿತಾಬಾಯಿ ಕೈ-ಕಾಲುಗಳಿಂದ ಸುಮಾಳನ್ನು ಹೊಡೆದು, ಅವಾಚ್ಯವಾಗಿ ನಿಂದಿದ್ದರು. 17.1.2018 ರಂದು ಸುಮಾ ತನ್ನ ತವರು ಮನೆಗೆ ಹೋಗುವುದಾಗಿ ಮತ್ತು ಒಡವೆ ಬಿಡಿಸಿ ಕೊಡುವಂತೆ ಕೇಳಿದ್ದರಿಂದ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಆಕೆಯ ಮೈಮೇಲೆ ಸುರಿದು, ಬೆಂಕಿ ಹಚ್ಚಿದ್ದರು. ಬೆಂಕಿ ಜ್ವಾಲೆ ಮೈಸುಡುತ್ತಿದ್ದ ನೋವು ತಾಳಲಾಗದೇ ನೀರಿನ ಡ್ರಮ್‌ನಲ್ಲಿ ಸುಮು ಮುಳುಗಿ ಬೆಂಕಿ ಆರಿಸಿಕೊಂಡಿದ್ದಳು. ನಂತರ ನೆರೆಹೊರೆಯವರು ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.

ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ಹೊಡೆದು, ಸೀಮೆಣ್ಣೆ ಹಾಕಿ ಸುಟ್ಟ ತನ್ನ ಗಂಡ ಗಿರಿಧರ, ಅತ್ತೆ ಲಲಿತಾ ಬಾಯಿ, ಮಾವ ಹಾಲಪ್ಪ ನಾಯ್ಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಮ ಹೇಳಿಕೆ ನೀಡಿದ್ದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ ಗ್ರಾಮಾಂತರ ಡಿವೈಎಸ್ಪಿ ಮಂಜುನಾಥ ಕೆ. ಗಂಗಲ್‌ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಆರ್.ಎನ್. ಪ್ರವೀಣಕುಮಾರ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗಳ ವಿರುದ್ಧದ ಆರೋಪವೆಲ್ಲಾ ಸಾಬೀತಾಗಿದ್ದರಿಂದ ಮೂವರಿಗೂ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹38 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು.

ಮಹಿಳೆ ಪರ ಸರ್ಕಾರಿ ವಕೀಲರಾದ ಕೆ.ಜಿ. ಜಯಪ್ಪ ವಾದ ಮಂಡಿಸಿದ್ದರು. ತನಿಖಾಧಿಕಾರಿ, ಸರ್ಕಾರಿ ವಕೀಲರ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ ಶ್ಲಾಘಿಸಿದ್ದಾರೆ.