ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಪ್ರತಿ ವರ್ಷದಂತೆ ಈ ಬಾರಿಯು ಚಾಮುಂಡಿಬೆಟ್ಟಕ್ಕೆ ಒಂದು ಸಾವಿರದ ಒಂದು ಮೆಟ್ಟಿಲುಗಳನ್ನು ಹತ್ತುವ ಮೂಲಕ ಹರಕೆ ಸಲ್ಲಿಸಿ, ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದೇನೆ. ರಾಜ್ಯ, ದೇಶಕ್ಕೆ ಒಳ್ಳೇಯದಾಗಬೇಕು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿಯ ರಕ್ಷಣೆ ಆಗುತ್ತಿದೆ. ಮೋದಿ ಅವರ ತಂಡದಲ್ಲಿ ಕೆಲಸ ಮಾಡಲು ನನಗೂ ಮತ್ತೊಂದು ಅವಕಾಶ ದೊರಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರಮೋದಿ ಅವರು ಉಪವಾಸವಿದ್ದಾರೆ. ಈ ಉಪವಾಸದ ವೇಳೆ ಬಹಳಷ್ಟು ಮಂದಿ ಉಪವಾಸವಿದ್ದು, ದೇವರ ದರ್ಶನ ಪಡೆಯುತ್ತಾರೆ. ನಾನೂ ಕೂಡ ಎಲ್ಲಾ ಭಕ್ತರಂತೆ ಬಂದಿದ್ದೇನೆ. ನಾಳೆ ಪ್ರತಿ ವರ್ಷದಂತೆ ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳಿಗೆ ಉಪಾಹಾರದ ವ್ಯವಸ್ಥೆ ಮಾದಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.ನಾನು ಉಸ್ತುವಾರಿ ಸಚಿವೆ ಆಗಿದ್ದಾಗ ವೈಭವದ ದಸರಾ ಆಗಿತ್ತು. ಹೊಸ ಆಯಾಮ ಕೊಟ್ಟು, ಹೊಸ ಯೋಜನೆ ಮಾಡಿದ್ದೇವು. ಮೊದಲ ಬಾರಿಗೆ ರೈತ, ಮಹಿಳಾ ದಸರಾ ಮಾಡಿದ್ದೇವು. ಹಳ್ಳಿಯವರಿಗೆ ಮೈಸೂರು ತೋರಿಸುವ ಕೆಲಸ ಮಾಡಿದ್ದೇವು. ಇದನ್ನು ಎಲ್ಲಾ ಸರ್ಕಾರಗಳೂ ಮುಂದುವರೆಸಬೇಕು. ದಸರಾ ಜನರ ದಸರಾ ಆಗಬೇಕು ಸರ್ಕಾರದ ದಸರಾ ಆಗಬಾರದು. ಹಿಂದೆ ಮಹಾರಾಜರ ದಸರಾ. ಈಗ ಜನರ ದಸರಾ ಆಗಬೇಕು ಅನ್ನೋ ಅಪೇಕ್ಷೆ ಇತ್ತು. ಈಗ ಕೆಲವನ್ನು ಸರ್ಕಾರ ಇಟ್ಟುಕೊಂಡಿದೆ, ಮತ್ತೆ ಕೆಲವನ್ನು ಬಿಟ್ಟಿದ್ದಾರೆ ಎಂದರು.
ದಸರಾವನ್ನು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳಬೇಕು. ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಯೋಜನೆ ಆಗಬೇಕಿದೆ. ಹೊಸ ಕಟ್ಟಡಗಳಿಂದ ಬೆಟ್ಟಕ್ಕೆ ಹಾನಿಯಾಗುವ ಭಯ ಇದೆ. ಬೆಟ್ಟವನ್ನ ಹಾಗೇಯೇ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ವಕೀಲ ಅರುಣಕುಮಾರ್, ಜಗದೀಶ್ ಮೊದಲಾದವರು ಇದ್ದರು.