ಕುಂದಾಪುರ: ಯೋಗವು ಕೇವಲ ಆಸನಗಳ ಅಭ್ಯಾಸವಲ್ಲ, ಅದು ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಎಂದು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರು ಹಾಗೂ ಖ್ಯಾತ ಆಯುರ್ವೇದ ವೈದ್ಯ ಡಾ. ರಾಜೇಶ್ ಬಾಯರಿ ಹೇಳಿದರು.

ಅವರು ಉಡುಪಿ ಜಿಲ್ಲೆಯ ಪಾರಂಪರಿಕ ಚಿಕಿತ್ಸಾ ಕೇಂದ್ರವಾದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಭಾನುವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಎಂದರೆ ಜೀವನಕ್ರಮವಾಗಿದ್ದು, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಎಂಬ ಅಷ್ಟಾಂಗ ಯೋಗದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹೇಳಿದರು. ಆಯುರ್ವೇದ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದವು ದೇಹವನ್ನು ಒಳಗಿನಿಂದ ಶುದ್ಧೀಕರಿಸಿದರೆ, ಯೋಗವು ಆಂತರಿಕ ಶಕ್ತಿಯನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವೇದಮೂರ್ತಿ ಶಂಕರನಾರಾಯಣ ಭಟ್ ಶಾರ್ಕೆ ಅಷ್ಟಾಂಗ ಯೋಗದ ನಿಯಮಗಳನ್ನು ಪಾಲಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಕುರಿತು ಮಾಹಿತಿ ನೀಡಿದರು. ಚಿತ್ರಕೂಟದ ಯೋಗ ಶಿಕ್ಷಕರಾದ ಕೃಷ್ಣ ಪ್ರಸನ್ನ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮಹಾಬಲ ಬಾಯರಿ, ಕಲಾವತಿ, ಡಾ. ಅನುಲೇಖಾ ಬಾಯರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.