ಸಾರಾಂಶ
ಗಂಗಾವತಿಯಲ್ಲಿ ಅಖಿಲ ಕರ್ನಾಟಕ ನಾಲ್ಕನೇ ಕವಿ- ಕಾವ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಗಂಗಾವತಿ
ಕಾವ್ಯಕ್ಕಿಂತ ಬದುಕು ದೊಡ್ಡದಾಗಿದೆ ಎಂದು ಹಿರಿಯ ಸಾಹಿತಿ ರಂಜಾನ್ ದರ್ಗಾ ಹೇಳಿದರು.ನಗರದ ಚೆನ್ನಬಸವೇಶ್ವರ ಕಲಾ ಮಂದಿರದಲ್ಲಿ ಕೇಂದ್ರ ಸಾಹಿತ್ಯ ವೇದಿಕೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕ ಏರ್ಪಡಿಸಿದ್ದ ಅಖಿಲ ಕರ್ನಾಟಕ ನಾಲ್ಕನೇ ಕವಿ- ಕಾವ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಾದವನು ಜಾತಿ–ಭೇದ ಬಿಡಬೇಕು, ಸುಖಿ ಸಮಾಜ ನಿರ್ಮಾಣದಲ್ಲಿ ಕಾವ್ಯಗಳು ಬಹಳ ಮುಖ್ಯವಾಗಿವೆ. ಧರ್ಮಗಳು ಬಂಧಿಖಾನೆಯಾಗಬಾರದು. ಎಲ್ಲಾ ಧರ್ಮಗಳನ್ನು ಅಪ್ಪಿಕೊಳ್ಳುವಂತಾಗಬೇಕೆಂದು ತಿಳಿಸಿದ ಅವರು, ದ್ವೇಷ, ಸಂಸ್ಕೃತಿಗಳನ್ನು ಸಾಹಿತಿಗಳು ಎದುರಿಸಬೇಕೆಂದು ಕರೆ ನೀಡಿದರು.ಈ ಭಾಗ ಸಾಧು ಸಂತರ, ಸೂಫಿಗಳು ಇರುವ ಸ್ಥಳವಾಗಿದೆ. ದಾಸ ಸಾಹಿತ್ಯದಲ್ಲಿ ಈ ಕ್ಷೇತ್ರ ಹೆಸರು ಪಡೆದಿದೆ. ಬಸವಾದಿ ಪ್ರಥಮರು ತಮ್ಮ ವಚನ, ಸಾಹಿತ್ಯ, ಕಾವ್ಯಗಳ ಮೂಲಕ ಸಮಾಜ ಬದಲಾಯಿಸುವ ಕಾರ್ಯ ಮಾಡಿದ್ದಾರೆ. ಇವರ ತತ್ವಗಳನ್ನು ಅಳವಡಿಸಿಸಿಕೊಳ್ಳ ಬೇಕೆಂದರು.
ಸಮ್ಮೇಳನಾಧ್ಯಕ್ಷ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ನಗರದಲ್ಲಿ ಕವಿ-ಕಾವ್ಯ ಸಮ್ಮೇಳನ ನಡೆದಿರುವುದು ಪ್ರಶಂಸನೀಯವಾಗಿದೆ. ಈ ಸಮ್ಮೇಳನಕ್ಕೆ ತಮ್ಮನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ನನಗೆ ಅಲ್ಲ, ಇಡೀ ಸಾಹಿತಿ, ಕವಿಗಳಿಗೆ ಈ ಗೌರವ ಸಲ್ಲುತ್ತದೆ ಎಂದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಾಡಿನಾದ್ಯಂತ ಹಾಗೂ ರಾಜ್ಯ, ಹೊರ ರಾಜ್ಯಗಳಲ್ಲಿಯೂ ವಿಸ್ತರಿಸಿ ಕನ್ನಡದ ಸಂಸ್ಕೃತಿ, ಭಾಷೆಯನ್ನು ಪಸರಿಸುತ್ತಾ ಸೃಜನಶೀಲತೆಯನ್ನು ಉಣಬಡಿಸಿದೆ ಎಂದು ಶ್ಲಾಘಿಸಿದರು.
ಕಾವ್ಯದ ಕುರಿತು ವ್ಯಖ್ಯಾನ ಮಾಡಿದ ಅವರು ಕಾವ್ಯಕ್ಕೆ ಮಾತೃ ಮೂಲ ಸಂಭಂದ, ದಾಖಲೀಕೃತ ನೆಲೆಗಳು, ಬುನಾದಿಯ ಮೇಲೆ ಅಕ್ಷರದ ಬೇರುಗಳು, ಕನ್ನಡ ಕಾವ್ಯದ ಅರಿಮೆ, ಕಾವ್ಯದ ಸುಗ್ಗಿ ಸೇರಿದಂತೆ ಹಲವಾರು ರೀತಿಯ ವಚನ- ಕಾವ್ಯ ಪರಂಪರೆ ಕುರಿತು ವಿಶ್ಲೇಷಿಸಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಚ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಡೆದು ಬಂದ ದಾರಿ, ಮತ್ತು ಸಮ್ಮೇಳನ ಕುರಿತು ವಿವರಿಸಿದರು.
ಸಾಮಾಜಿಕ ಚಿಂತಕಿ ಶೈಲಜಾ ಹಿರೇಮಠ ಸಮ್ಮೇಳನಾಧ್ಯಕ್ಷ ಡಾ. ಜಾಜಿ ದೇವೇಂದ್ರಪ್ಪ ಅವರಿಗೆ ಗೌರವ ಪ್ರದಾನ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷ ಶರಣಪ್ಪ ತಳ್ಳಿ, ನಾಗಭೂಷಣ ಅರಳಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಡಾ. ಸಿ. ಮಹಾಲಕ್ಷ್ಮೀ, ರಮೇಶ ಗಬ್ಬೂರು, ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ವಿಜಯಕುಮಾರ ರಾಯ್ಕರ್ ಸೇರಿದಂತೆ ಪ್ರಮುಖರು ಇದ್ದರು.ಸಾಹಿತಿ ಎಚ್. ವೇದಾವತಿ ಪ್ರಾರ್ಥಿಸಿದರು. ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಅವರಿಂದ ನಾಡಗೀತೆ, ಶರಣಪ್ಪ ತಳ್ಳಿ ಸ್ವಾಗತಿಸಿದರು. ಡಾ. ಪಿ. ದಿವಾಕರ ನಾರಾಯಣ ನಿರೂಪಿಸಿದರು.