ಪುಷ್ಯ ಮಳೆಗೆ ಜನಜೀವನ ಸಂಪೂರ್ಣ ಸ್ತಬ್ಧ

| Published : Jul 20 2024, 12:49 AM IST

ಪುಷ್ಯ ಮಳೆಗೆ ಜನಜೀವನ ಸಂಪೂರ್ಣ ಸ್ತಬ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮಘಟ್ಟದಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಖಾನಾಪುರ ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿವೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಪಶ್ಚಿಮಘಟ್ಟದಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಖಾನಾಪುರ ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ 17 ಮನೆಗಳಿಗೆ ಹಾನಿ ಉಂಟಾಗಿದ್ದು, ಶುಕ್ರವಾರ ಒಂದೇ ದಿನ ಒಟ್ಟು 12 ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ, ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದ ತುಂಬು ಗರ್ಭಿಣಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಡರಾತ್ರಿ ಮನೆಯ ಗೋಡೆ ಬೀಳುತ್ತಿರುವ ಬಿಳ್ಳುವ ಶಬ್ದಕೇಳಿ ಎಚ್ಚರಗೊಂಡು ಗರ್ಭಿಣಿಯನ್ನು ಕರೆದುಕೊಂಡು ಹೋರಗೋಡಿ ಬಂದಿದ್ದರಿಂದ ಪ್ರಾಣಹಾನಿ ತಪ್ಪಿದೆ. ನಂದಗಡ ಪೊಲೀಸ್ ಠಾಣೆ ವಾಪ್ತಿಯಲ್ಲಿ ಘಟನೆ ನಡೆದಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಲೋಂಡಾ, ಕಣಕುಂಬಿ, ಹೆಮ್ಮಡಗಾ, ಜಾಂಬೋಟಿ, ಶಿರೋಲಿ, ಗುಂಜಿ ಅರಣ್ಯದಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ದೇವಲತ್ತಿ, ತೋಪಿನಕಟ್ಟಿ, ಇಟಗಿ, ಗಂದಿಗವಾಡ, ಬೀಡಿ, ಪಾರಿಶ್ವಾಡ, ದೇವಲತ್ತಿ ಸುತ್ತಮುತ್ತ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಸತತಧಾರೆಯ ಪರಿಣಾಮ ಕಾನನವಾಸಿಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಡಿನಂಚಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ನೀರಿನ ಹರಿವು ಹರಿಯುತ್ತಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ನದಿಗಳನ್ನು ಸಂಗಮಿಸುವ ಹಳ್ಳಕೊಳ್ಳಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 30ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಪರಿಣಾಮ ಸಂಚಾರರ ತೀವ್ರ ಅಸ್ತವ್ಯಸ್ತವಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿತೀರದ ಕೃಷಿ ಜಮೀನುಗಳಲ್ಲಿ ನದಿ ನೀರು ನುಗ್ಗಿ ಗದ್ದೆಗಳು ಜಲಾವೃತಗೊಂಡಿವೆ. ಲೋಂಡಾ ಅರಣ್ಯ ವ್ಯಾಪ್ತಿಯ ಸಾತನಾಳಿ ಮತ್ತು ಮಾಚಾಳಿ ಗ್ರಾಮಗಳ ಬಳಿಯ ಸೇತುವೆ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ತಹಸೀಲ್ದಾರ್ ಪ್ರಕಾಶ ಗಾಯಕವಾಡ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ:

ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಒಂದೂವರೆ ಪಟ್ಟು ಹೆಚ್ಚಳಗೊಂಡಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಇಲ್ಲದ್ದರಿಂದ ಕುಡಿಯುವ ನೀರಿನ ಬೋರವೆಲ್‌ಗಳು ಶಾಂತವಾಗಿವೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ.

ಮೂಲಗಳ ಪ್ರಕಾರ ಶುಕ್ರವಾರ ಕಣಕುಂಬಿ ಸುತ್ತಮುತ್ತ 14.8 ಸೆಂ.ಮೀ, ಜಾಂಬೋಟಿ 8.4 ಸೆಂ.ಮೀ, ಖಾನಾಪುರ ಪಟ್ಟಣ 4.1 ಸೆಂ.ಮೀ, ಅಸೋಗಾ 5 ಸೆಂ.ಮೀ, ಗುಂಜಿ 7.6 ಸೆಂ.ಮೀ, ಲೋಂಡಾ 10 ಸೆಂ.ಮೀ, ನಾಗರಗಾಳಿ 6.5 ಸೆಂ.ಮೀ, ಬೀಡಿ ಮತ್ತು ಕಕ್ಕೇರಿ ಭಾಗದಲ್ಲಿ 4 ಸೆಂ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.