ವಿದ್ಯೆ ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆ: ಸಾಹಿತಿ ಬನ್ನೂರು ಕೆ.ರಾಜು

| Published : Jun 23 2024, 02:04 AM IST

ವಿದ್ಯೆ ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆ: ಸಾಹಿತಿ ಬನ್ನೂರು ಕೆ.ರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಎನ್ನುವುದು ಸರ್ವರ ಪಾಲಿನ ಸಂಜೀವಿನಿ ಆಗಿರುವುದರಿಂದ ಎಂತಹ ಕಷ್ಟವಿದ್ದರೂ ಏನೇ ತೊಂದರೆ ಬಂದರೂ ಶಿಕ್ಷಣದಿಂದ ಯಾರೂ ದೂರವಾಗಬಾರದು. ಶಿಕ್ಷಣವು ಶಾಶ್ವತವಾದ ಒಂದು ಅಮೂಲ್ಯ ಸಂಪತ್ತಾಗಿದ್ದು, ಇದನ್ನು ಯಾರು ಬೇಕಾದರೂ ಗಳಿಸಬಹುದಾಗಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವತ್ತ ಆಸಕ್ತಿಯಿಂದ ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣ ಎನ್ನುವುದು ಸರ್ವರ ಪಾಲಿನ ಸಂಜೀವಿನಿ ಆಗಿರುವುದರಿಂದ ಎಂತಹ ಕಷ್ಟವಿದ್ದರೂ ಏನೇ ತೊಂದರೆ ಬಂದರೂ ಶಿಕ್ಷಣದಿಂದ ಯಾರೂ ದೂರವಾಗಬಾರದು. ಶಿಕ್ಷಣ ಯಾರಲ್ಲಿ ಇರುವುದಿಲ್ಲವೋ ಅವರು ಬದುಕಿದ್ದೂ ಸತ್ತಂತೆ ಎಂದು ಸಾಹಿತಿ ಬನ್ನೂರು ಕೆ. ರಾಜು ತಿಳಿಸಿದರು.

ನಗರದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವು ಶಾಶ್ವತವಾದ ಒಂದು ಅಮೂಲ್ಯ ಸಂಪತ್ತಾಗಿದ್ದು, ಇದನ್ನು ಯಾರು ಬೇಕಾದರೂ ಗಳಿಸಬಹುದಾಗಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವತ್ತ ಆಸಕ್ತಿಯಿಂದ ಮುನ್ನಡೆಯಬೇಕು ಎಂದರು.

ಸನ್ಮಾರ್ಗದಲ್ಲಿ ವಿದ್ಯಾವಂತರಾಗುವುದೆಂದರೆ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವುದಾಗಿದೆ. ಹೀಗಾಗಿ ತಾವಷ್ಟೇ ಶಿಕ್ಷಿತರಾದರೆ ಸಾಲದು. ನೆರೆ ಹೊರೆಯವರನ್ನೂ ಶಿಕ್ಷಣ ಕಲಿಕೆಯತ್ತ ಪ್ರೇರೇಪಿಸಿ ಇಡೀ ಸಮಾಜವನ್ನು ಶಿಕ್ಷಣಮಯ ಮಾಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳ ನಡೆ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳ ಕಡೆ ಆಗುವಂತೆ ಮಾಡಬೇಕು ಎಂದು ಅವರು ಹೇಳಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಹಾದೇವಿ, ಸೌಭಾಗ್ಯ, ಚಂದನ್, ಹರ್ಷ, ಆರ್. ರಚನಾ, ಜ್ಯೋತಿ ವಿಶ್ವಕರ್ಮ, ಚಿರಾಗ್, ನೇತ್ರಾವತಿ, ಅರ್ಜುನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಸೇವಕ ಕೆ. ರಘುರಾಂ, ಮಂಚೇಗೌಡನಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಕೆ.ಎನ್. ಕಲ್ಪನಾ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಶಾಲೆಯ ಮುಖ್ಯ ಶಿಕ್ಷಕ ಕೆ.ಜಿ. ಮಹೇಶ್, ದೈಹಿಕ ಶಿಕ್ಷಣದ ವಿಶೇಷಾಧಿಕಾರಿ ವೆಂಕಟೇಶ್, ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗವೇಣಿ, ಪ್ರೌಢಶಾಲಾ ಶಿಕ್ಷಕರಾದ ಬಸವರಾಜು, ಎಸ್. ನಂಜುಂಡನಾಯಕ, ಭಾರತಿ ಎಸ್. ಶಾಸ್ತ್ರಿ, ಎ. ತಾರಾ, ಲಕ್ಷ್ಮೀ ಜಿ. ಭಟ್, ವೈ. ಪದ್ಮಾ ಇದ್ದರು. ಎಸ್. ವಿಜಿ ಸ್ವಾಗತಿಸಿದರು.