ಸಾರಾಂಶ
ಬಾಳೆಹೊನ್ನೂರು, ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನ ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭಕ್ಕೆ ಚಾಲನೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನ ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಶುಕ್ರವಾರದಿಂದ ಆರಂಭಗೊಂಡ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಪುಣ್ಯ ಭೂಮಿ ಯಲ್ಲಿ ಬಹಳಷ್ಟು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರ ಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ವಿಚಾರ ವಿಮರ್ಶೆಗಳು ಸಂಸ್ಕೃತಿ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಬುದ್ಧಿ ವಿಕಾಸಗೊಂಡಂತೆ ಭಾವನೆಗಳು ಬೆಳೆದು ಬರುವ ಅವಶ್ಯಕತೆಯಿದೆ.ಸಹನೆ ಗುಣ ತಾಳ್ಮೆ ಇದ್ದು ಮನಸ್ಸು ವಿಕಾಸಗೊಳ್ಳಬೇಕು. ಈ ನಾಡಿನ ಸಂಸ್ಕೃತಿ ಪಾವಿತ್ರ್ಯತೆ ಕಾಪಾಡಿಕೊಂಡು ಬರುವುದು ಎಲ್ಲರ ಧ್ಯೇಯವಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ಬಾಳಿ ಬದುಕುವ ಮನುಷ್ಯನಿಗೆ ದಾರಿ ದೀಪವೆಂದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಮಾತನಾಡಿ, ಮನುಷ್ಯನಿಗೆ ಮನುಷ್ಯತ್ವ ಮುಮುಕ್ಷತ್ವ ಮತ್ತು ದೊಡ್ಡವರ ಸಹವಾಸ ದೊರಕಲು ಭಗವಂತನ ಕೃಪೆಯಿದ್ದಾಗ ಮಾತ್ರ ದೊರಕಲು ಸಾಧ್ಯ ಎಂದರು.
ಅರಿವು ಆದರ್ಶಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಜನ ಸಮುದಾಯ ಬರುವಂತೆ ಪ್ರೇರಣೆ ನೀಡಿದ ಮಹಾನ್ ಶಕ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರು. ಶ್ರಾವಣ ಒಂದು ತಿಂಗಳ ಕಾಲ ಅವರ ಆದರ್ಶ ಚಿಂತನೆಗಳನ್ನು ಅರಿಯಲು ಎಲ್ಲರಿಗೂ ಸುವರ್ಣಾವಕಾಶ ದೊರೆತಿರಲು ಗುರುವೇ ಕಾರಣಿಭೂತನಾಗಿರುವುನೆಂಬುದನ್ನು ಮರೆಯಬಾರದು ಎಂದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿ, ಶಿವಮೊಗ್ಗದ ಎಸ್.ಎಚ್.ಸಿದ್ಧಣ್ಣ, ನಾಗರನವಿಲೆಯ ಪವನಕುಮಾರ್, ಸಿದ್ದೇಶ್ವರ ಶಾಸ್ತ್ರಿಗಳು, ಶಂಕರನಹಳ್ಳಿ ಸದ್ಭಕ್ತರು ಉಪಸ್ಥಿತರಿದ್ದರು. ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿ, ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿ ಸ್ವಾಗತಿಸಿ, ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.೨೬ಬಿಹೆಚ್‌ಆರ್ ೪:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಧರ್ಮ ಸಮಾರಂಭವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಉದ್ಘಾಟಿಸಿದರು. ಹೂಲಿ, ನೆಗಳೂರು, ಹುಡಗಿ ಮಠಗಳ ಶಿವಾಚಾರ್ಯರು ಉಪಸ್ಥಿತರಿದ್ದರು.