ರಾಜ್ಯದಲ್ಲಿದ್ದಷ್ಟು ದುಬಾರಿ ಜೀವನ ಬೇರೆಲ್ಲೂ ಇಲ್ಲ: ಡಾ.ಇಂದ್ರೇಶ್

| Published : Apr 02 2025, 01:04 AM IST

ರಾಜ್ಯದಲ್ಲಿದ್ದಷ್ಟು ದುಬಾರಿ ಜೀವನ ಬೇರೆಲ್ಲೂ ಇಲ್ಲ: ಡಾ.ಇಂದ್ರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ನಷ್ಟವನ್ನು ಸರಿದೂಗಿಸಲು ಮೊದಲ ಬಾರಿಗೆ ನೀರಿನ ಸುಂಕವನ್ನು ಶೇ.೧೫ ರಿಂದ ೨೦ರಷ್ಟು ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ. ಪ್ರತಿಯೊಂದು ಬೆಲೆಯನ್ನು ಮಾನವೀಯತೆ, ಕರುಣೆಯಿಲ್ಲದೆ ವಸೂಲಿ ಮಾಡುತ್ತಿರುವ ದರೋಡೆಕೋರ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ರಾಜ್ಯದ ಜನರು ನಿರ್ಧಾರ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಇಡೀ ದೇಶದಲ್ಲಿ ಕರ್ನಾಟಕದಲ್ಲಿರುವಷ್ಟು ದುಬಾರಿ ಜೀವನ ಬೇರೆಲ್ಲೂ ಕಾಣಸಿಗುವುದಿಲ್ಲ. ಇದು ಪಕ್ಷವನ್ನು ಅಧಿಕಾರಕ್ಕೆ ತಂದ ಜನರಿಗೆ ಕಾಂಗ್ರೆಸ್ ನೀಡಿರುವ ಕೊಡುಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ವ್ಯಂಗ್ಯವಾಡಿದರು.

ಹಾಲು, ವಿದ್ಯುತ್, ಮುದ್ರಾಂಕ ಶುಲ್ಕ, ಆಸ್ಪತ್ರೆ ಸೌಲಭ್ಯಗಳು, ಬಸ್ ದರ, ವೃತ್ತಿಪರ ತೆರಿಗೆ , ಮದ್ಯ ಬೆಲೆ ಸೇರಿದಂತೆ ಎಲ್ಲಾ ಬೆಲೆಗಳನ್ನು ಗನನಕ್ಕೇರಿಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಬಡವರ ಮೇಲೆ ಕನಿಕರವಿಲ್ಲ, ಜನರನ್ನು ಶೋಷಣೆ ಮಾಡುವುದನ್ನೇ ಗುರಿಯಾಗಿಸಿಕೊಂಡು ಯಾವುದೇ ಮಾನದಂಡಗಳನ್ನು ಅನುಸರಿಸದೆ ಮನಸೋಇಚ್ಛೆ ಬೆಲೆ ಏರಿಕೆ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸದರು.

ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕರ್ನಾಟಕ ಜನರ ದಾರಿ ತಪ್ಪಿಸಿ ಕಾಂಗ್ರೆಸ್ ಸಚಿವರು, ಶಾಸಕರು ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಆಡಳಿತ ನಿಯಂತ್ರಣ ಕಳೆದುಕೊಂಡಿದೆ. ಲಕ್ಷಾಂತರ ಕೋಟಿ ಸಾಲದ ಹೊರೆಯನ್ನು ರಾಜ್ಯದ ಮೇಲೆ ಹಾಕಿದೆ. ಜನ ಹಿತವನ್ನು ಕಡೆಗಣಿಸಿ ಅಧಿಕಾರದ ಹಿತವನ್ನಷ್ಟೇ ಗುರಿಯಾಗಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ೯ ರು.ವರೆಗೆ ಏರಿಸಿದೆ. ೬೬೦ ಕೋಟಿ ರು. ಹಾಲಿನ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಬಡವರ, ರೈತರು ಮತ್ತು ಮಹಿಳೆಯರ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೀಗ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಸ್ಮಾರ್ಟ್ ಆಗಿ ಲೂಟಿ ಹೊಡೆಯುವುದಕ್ಕೆ ಮುಂದಾಗಿದೆ ಎಂದು ಟೀಕಿಸಿದರು.

ವೈದ್ಯಕೀಯ ವೆಚ್ಚಗಳನ್ನು ದುಪ್ಪಟ್ಟುಗೊಳಿಸಿರುವ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಮತ್ತು ಐಪಿಡಿ ಶುಲ್ಕವನ್ನು ಶೇ.೧೦ರಿಂದ ೩೦ರಷ್ಟು ಹೆಚ್ಚಿಸಿದೆ. ಮರಣೋತ್ತರ ಪ್ರಮಾಣಪತ್ರ, ವೈದ್ಯಕೀಯ ಪ್ರಮಾಣಪತ್ರ, ಫಿಸಿಕಲ್ ಫಿಟ್ನೆಸ್ ಪ್ರಮಾಣಪತ್ರ, ಗಾಯದ ಪ್ರಮಾಣಪತ್ರ, ದಾಖಲಾತಿ ಶುಲ್ಕ, ಆಪರೇಷನ್ ಎಕ್ಸ್-ರೇ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಕನಿಷ್ಠ ೫೦ ರು.ನಿಂದ ೨೫೦ ರು.ವರೆಗೆ ಏರಿಸಲಾಗಿದೆ. ಮಧ್ಯಮವರ್ಗದವರಿಗೆ ಮುದ್ರಾಂಕ ಶುಲ್ಕ ಹೊರೆಯಾಗಿದೆ. ಆಸ್ತಿ ವಿಭಜನೆ ಶುಲ್ಕ ೪ ಪಟ್ಟು ಏರಿಸಿದ್ದಾರೆ. ದತ್ತು ಸ್ವೀಕಾರ ಪತ್ರ, ಅಫಿಡೆವಿಟ್, ಸ್ವಾಧೀನವಿಲ್ಲದ ಮಾರಾಟ ಪತ್ರ, ಡಿಟಿಡಿ, ಕ್ಯಾನ್ಸಲೇಷನ್ ಡೀಡ್ ಸೇರಿದಂತೆ ಇತರೆ ದಾಖಲೆಗಳಿಗೆ ೮೦ ರು.ನಿಂದ ೫೦೦ ರು.ವರೆಗೆ ಹೆಚ್ಚಿಸಿದ್ದಾರೆ ಎಂದು ದೂಷಿಸಿದರು.

ಬಿಎಂಟಿಸಿ ಬಸ್ ದರವನ್ನು ೩ ರಿಂದ ೫ ರು.ವರೆಗೆ, ಕೆಎಸ್‌ಆರ್‌ಟಿಸಿ ಬಸ್ ದರವನ್ನು ಶೇ.೧೫ರಷ್ಟು ಏರಿಸಲಾಗಿದೆ. ಮದ್ಯದ ಮೇಲೆ ೨೦೨೩ರಲ್ಲಿ ಶೇ.೨೦ರಷ್ಟು, ಬಿಯರ್ ಮೇಲೆ ಶೇ.೧೦ರಷ್ಟು ಅಬಕಾರಿ ಸುಂಕ ಹೆಚ್ಚಿಸಿದೆ. ವಿದ್ಯುತ್ ಸುಂಕವನ್ನು ಪ್ರತಿ ಯೂನಿಟ್‌ಗೆ ೭೦ ಪೈಸೆ ಹೆಚ್ಚಿಸಿದೆ. ೨೦೦ ಯೂನಿಟ್ ಮೀರಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ೨.೮೯ ರು.ಹೆಚ್ಚಳ ಮಾಡಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಆರ್ಥಿಕ ನಷ್ಟವನ್ನು ಸರಿದೂಗಿಸಲು ಮೊದಲ ಬಾರಿಗೆ ನೀರಿನ ಸುಂಕವನ್ನು ಶೇ.೧೫ ರಿಂದ ೨೦ರಷ್ಟು ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ. ಪ್ರತಿಯೊಂದು ಬೆಲೆಯನ್ನು ಮಾನವೀಯತೆ, ಕರುಣೆಯಿಲ್ಲದೆ ವಸೂಲಿ ಮಾಡುತ್ತಿರುವ ದರೋಡೆಕೋರ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ರಾಜ್ಯದ ಜನರು ನಿರ್ಧಾರ ಮಾಡಬೇಕು ಎಂದರು.

ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇ.೪ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ. ಕರ್ನಾಟಕ ಖರೀದಿ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ಮಾಡುವುದು, ೨ ಕೋಟಿಯೊಳಗಿನ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ನಿರ್ದಿಷ್ಟ ಪ್ರಮಾಣದ ಮೀಸಲನ್ನು ಒದಗಿಸುವ ಮೂಲಕ ಅಲ್ಪಸಂಖ್ಯಾತರ ಪ್ರತಿನಿಧಿತ್ವವನ್ನು ಹೆಚ್ಚಿಸುವ ಉದ್ದೇಶವಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಏ.೨ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ರ್‍ಯಾಲಿ ನಡೆಯಲಿದೆ. ಈ ರ್‍ಯಾಲಿಯಲ್ಲಿ ಮಂಡ್ಯದಿಂದ ೫ ಸಾವಿರ ಜನರು ಪಾಲ್ಗೊಳ್ಳುವರು. ಏ.೮ರಂದು ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಂಡ್ಯದಲ್ಲಿ ಜನಾಕ್ರೋಶ ರ್‍ಯಾಲಿ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ವಸಂತಕುಮಾರ್, ವಿವೇಕ್, ಸಿ.ಟಿ.ಮಂಜುನಾಥ, ನಾಗಾನಂದ, ಬಿ.ಕೃಷ್ಣ ಇದ್ದರು.