ಮೂಲ ತಿಳಿದುಕೊಂಡರೆ ಬದುಕು ಪರಿಪೂರ್ಣ: ರಾಘವೇಶ್ವರ ಶ್ರೀ

| Published : Aug 20 2024, 12:54 AM IST

ಸಾರಾಂಶ

ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 30ನೇ ದಿನವಾದ ಸೋಮವಾರ ಶ್ರೀರಘೂತ್ತಮ ಮಠೋದ್ಧಾರ ಎಂಬ ಪ್ರಾಚೀನ ತಾಳೇಗರಿ ಗ್ರಂಥದ ಅನಾವರಣ ಮಾಡಿ ಆಶೀರ್ವಚನ ನೀಡಿದರು.

ಗೋಕರ್ಣ: ಬದುಕಿನ ಧ್ಯೇಯ ಮೂಲವನ್ನು ತಿಳಿದುಕೊಳ್ಳುವುದು. ನಮ್ಮ ಮೂಲವನ್ನು, ಬದುಕಿನ ಮೂಲವನ್ನು, ಜಗತ್ತಿನ ಮೂಲವನ್ನು ತಿಳಿದುಕೊಂಡಾಗ ಬದುಕು ಪರಿಪೂರ್ಣವಾಗುತ್ತದೆ. ಬದುಕಿನ ಪ್ರತಿ ಹಂತದಲ್ಲೂ ಮೂಲವನ್ನು ತಿಳಿದುಕೊಂಡು ಕೃತಜ್ಞತೆಯಿಂದ ನೆನೆಯುವುದು ಅಗತ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 30ನೇ ದಿನವಾದ ಸೋಮವಾರ ಶ್ರೀರಘೂತ್ತಮ ಮಠೋದ್ಧಾರ ಎಂಬ ಪ್ರಾಚೀನ ತಾಳೇಗರಿ ಗ್ರಂಥದ ಅನಾವರಣ ಮಾಡಿ ಆಶೀರ್ವಚನ ನೀಡಿದರು.

ರಘೂತ್ತಮ ಮಠೋದ್ಧಾರದಲ್ಲಿ ಶಂಕರರ ಜೀವನದರ್ಶನ, ರಘೂತ್ತಮ ಮಠದ ಆವಿರ್ಭಾವದ ವಿವರಣೆಯಿದೆ. ವರದ ಮುನಿಗಳು- ಶಂಕರಾಚಾರ್ಯರ ಸಮಾಗಮ, ವರದ ಮುನಿಗಳು ರಾಮಾದಿ ವಿಗ್ರಹಗಳನ್ನು ಶಂಕರಾಚಾರ್ಯರಿಗೆ ಹಸ್ತಾಂತರಿಸಿದ್ದು, ತಾಪದಿಂದ ತಂಪಿನೆಡೆಗೆ ವರದ ಮುನಿಗಳು ಪ್ರಯಾಣ ಮಾಡುವ ಮುನ್ನ ಶಂಕರಾಚಾರ್ಯರಿಗೆ ದೇವರ ವಿಗ್ರಹಗಳನ್ನು ನೀಡಿದ ಅಪೂರ್ವ ವಿವರಣೆಯನ್ನು ಒಳಗೊಂಡ ಈ ಮಹತ್ ಗ್ರಂಥ ನಮ್ಮ ಮೂಲವನ್ನು ನಮಗೆ ತಿಳಿಸುತ್ತದೆ ಎಂದರು.

ಗೋಕರ್ಣ ಮಂಡಲಕ್ಕೆ ಆಚಾರ್ಯ ಪೀಠವಾಗಿರಲಿ ಎಂಬ ಶಂಕರರ ಸಂಕಲ್ಪದೊಂದಿಗೆ ವಿದ್ಯಾನಂದರನ್ನು ಪ್ರಥಮ ಆಚಾರ್ಯರನ್ನಾಗಿ ನೇಮಕ ಮಾಡಿ ವಿಗ್ರಹವನ್ನು ನೀಡುವ ಮೂಲಕ ಶ್ರೀಮಠದ ಆವೀರ್ಭಾವವಾಯಿತು. ತಾಳೇಗರಿ ಗ್ರಂಥದ ಅನಾವರಣ

ಮಠದ ಮೂಲವನ್ನು ನೆನೆಯೋಣ. ನಮ್ಮ ಮೂಲವನ್ನು, ಪ್ರಪಂಚದ ಮೂಲವನ್ನು ಅರಿಯೋಣ. ಇದರಿಂದ ನಮ್ಮ ಬದುಕಿಗೆ ಅರ್ಥ ಬರುತ್ತದೆ ಎಂದು ಬಣ್ಣಿಸಿದರು.

ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ನಮ್ಮ ದೃಷ್ಟಿಗೆ ಗೋಚರವಾಗುವುದು ಅರ್ಧ ಮಾತ್ರ; ಬಹಿರಂಗ ಕಂಡರೆ ಅಂತರಂಗ ಅದೃಶ್ಯವಾಗಿರುತ್ತದೆ. ಮುಂದಿನ ಭಾಗ ಕಾಣಿಸಿದರೆ, ಹಿಂಭಾಗ ಕಾಣುವುದಿಲ್ಲ. ಅಂತೆಯೇ ಆಕಾಶ ಕೂಡಾ ಅರ್ಧ ಭಾಗ ಮಾತ್ರ ಕಾಣುತ್ತದೆ. ಭೂಮಿ ಸೂರ್ಯನ ಸುತ್ತ ಸುತ್ತುವಾಗ ಆರು ರಾಶಿಗಳು ಮೇಲ್ಭಾಗದಲ್ಲಿ ಆರು ರಾಶಿಗಳು ಕೆಳಭಾಗದಲ್ಲಿರುತ್ತವೆ. ಪ್ರತಿದಿನ ಸರಿಸುಮಾರು ಎರಡು ಗಂಟೆ ಅವಧಿಗೊಮ್ಮೆ ರಾಶಿ ಬದಲಾಗುತ್ತದೆ. ಆ ರಾಶಿ ಬದಲಾದಂತೆ ನಮ್ಮ ಬದುಕು ಬದಲಾಗುತ್ತದೆ ಎಂದರು.

ಪ್ರಕೃತಿ ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿರುತ್ತದೆ. ಅದನ್ನು ಕಂಡುಕೊಳ್ಳುವ ಜ್ಞಾನ ನಮಗೆ ಬೇಕು. ಇದಕ್ಕೆ ಕಾಲಜ್ಞಾನ ಅಗತ್ಯವಿದೆ. ಸ್ಥಿತಿ, ಕವಡೆ, ತಾಂಬೂಲ ಹೀಗೆ ಹಲವು ವಿಧಗಳಿಂದ ಆಯಾ ಸಮಯದ ಲಗ್ನ ತಿಳಿದುಕೊಳ್ಳಬಹುದು. ಯಾವುದೇ ಜಾತಕ ಅಥವಾ ಪ್ರಶ್ನೆ ತೆಗೆದುಕೊಂಡರೆ ಅದಕ್ಕೆ ದೈವಾನುಗ್ರಹ ಇದೆಯೇ ಎಂದು ಮೊದಲು ತಿಳಿದುಕೊಳ್ಳಬೇಕು ಎಂದರು.

ಶ್ರಿರಘೂತ್ತಮ ಮಠೋದ್ಧಾರ ಗ್ರಂಥವನ್ನು ದಕ್ಷಿಣ ಬೆಂಗಳೂರು ಮಂಡಲದ ಪ್ರಧಾನ ಗುರಿಕ್ಕಾರ ಜೆಡ್ಡಿ ರಾಮಚಂದ್ರ ಭಟ್ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಜಿ.ಜಿ. ಹೆಗಡೆ ತಲೆಕೇರಿ, ದಕ್ಷಿಣ ಬೆಂಗಳೂರು ಮಂಡಲ ಅಧ್ಯಕ್ಷ ಡಾ. ಶ್ರೀಪಾದ ಹೆಗಡೆ, ಕಾರ್ಯದರ್ಶಿ ಶ್ಯಾಂಪ್ರಸಾದ್ ಚೇರಾಲು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ವಿನಾಯಕ ಶಾಸ್ತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಹೆಗಡೆ ನಿರೂಪಿಸಿದರು.