ಮಾನವ ಜನ್ಮವು ಹಲವು ಜನ್ಮದ ಪುಣ್ಯದ ಫಲವಾಗಿದ್ದು, ಅರಿವು ಮತ್ತು ಆಚಾರದಿಂದ ಮಾನವ ಜೀವನ ಉಜ್ವಲವಾಗಲಿದೆ. ಪ್ರತಿಯೊಬ್ಬ ವ್ಯಕ್ತಿಗೆ ಗುರು ಮತ್ತು ಗುರಿ ಇದ್ದಾಗ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮಾನವ ಜನ್ಮವು ಹಲವು ಜನ್ಮದ ಪುಣ್ಯದ ಫಲವಾಗಿದ್ದು, ಅರಿವು ಮತ್ತು ಆಚಾರದಿಂದ ಮಾನವ ಜೀವನ ಉಜ್ವಲವಾಗಲಿದೆ. ಪ್ರತಿಯೊಬ್ಬ ವ್ಯಕ್ತಿಗೆ ಗುರು ಮತ್ತು ಗುರಿ ಇದ್ದಾಗ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ತಾಲೂಕಿನ ಕಡೆ ನಂದಿಹಳ್ಳಿಯಲ್ಲಿ ಶ್ರೀಮದ್ ರಂಭಾಪುರಿ ಶಾಖಾಮಠದ ಶ್ರೀ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯಾತ್ಮಕ ಬೋಧನೆಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಸಾಮಾಜಿಕ ವಲಯದಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವುದೇ ಜೀವನದ ಗುರಿಯಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಪ್ರತಿಪಾದಿಸಿದ್ದಾರೆ. ಇದೇ ದಾರಿಯಲ್ಲಿ 12ನೇ ಶತಮಾನದ ಶರಣರು ಮುನ್ನಡೆದು ಬದುಕನ್ನು ಕಟ್ಟಿಕೊಂಡರು. ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಯಾರೂ ಬಲಿ ಕೊಡಬಾರದು ಎಂದರು.
ದುಗ್ಲಿ ಶ್ರೀ ಗುರು ರೇವಣಸಿದ್ದೇಶ್ವರರು ಮಠದ ಜೊತೆಗೆ ಜನ್ಮ ಭೂಮಿ ಕಡೇನಂದಿಹಳ್ಳಿಯ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮವನ್ನು ಶ್ರೀಮದ್ ರಂಭಾಪುರಿ ಶಾಖಾ ಮಠವನ್ನಾಗಿ ಪರಿವರ್ತಿಸಿ ಶ್ರೀಗಳವರಿಗೆ ಗುರು ಪಟ್ಟಾಧಿಕಾರ ಮತ್ತು ಷಟಸ್ಥಲ ಬ್ರಹ್ಮ ಉಪದೇಶ ನೀಡಿ ದಂಡ ಕಮಂಡಲ ಸಮೇತ ಪಂಚ ಮುದ್ರಾ ಅನುಗ್ರಹಿಸಿ ಶ್ರೀ ಶುಭ ಹಾರೈಸಲಾಗಿದೆ ಎಂದರು.ಧರ್ಮ ಸಮಾರಂಭವನ್ನು ಉದ್ಘಾಟಿಸಿದ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ಶಾಂತಿ ನೆಮ್ಮದಿ ಬದುಕಿಗೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಸಕಲರ ಒಳಿತಿಗಾಗಿ ಸದಾ ಶ್ರಮಿಸುತ್ತಾ ಬಂದಿದೆ. ಈ ಧರ್ಮದ ಪಂಚಪೀಠಗಳು ರಾಷ್ಟ್ರೀಯ ಗುರುಪೀಠಗಳಾಗಿ ಧರ್ಮ ಸಂಸ್ಕೃತಿ ಪರಂಪರೆ ಆದರ್ಶ ಚಿಂತನೆಗಳನ್ನು ಬೋಧಿಸುತ್ತಾ ಬಂದಿದ್ದಾರೆ. ಕಡೇನಂದಿಹಳ್ಳಿ ಶ್ರೀ ರಂಭಾಪುರಿ ಪೀಠದ ಶಾಖಾ ಮಠಕ್ಕೆ ಶ್ರೀ
ರೇವಣಸಿದ್ದೇಶ್ವರ ಶಿವಾಚಾರ್ಯರಿಗೆ ಪಟ್ಟ ಕಟ್ಟಿ ಅನುಗ್ರಹಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯವೆಂದರು.ಮುಂಡಗೋಡ ಮಾಜಿ ಶಾಸಕ ವಿ.ಎಸ್. ಪಾಟೀಲ್ ಶ್ರೀಮಠದ ನೀಲ ನಕ್ಷೆ ಬಿಡುಗಡೆ ಮಾಡಿ ಮಾತನಾಡಿದರು. ನೂತನ ಪಟ್ಟಾಧ್ಯಕ್ಷರಾದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಸತ್ಯ ಧರ್ಮ ಸಂಸ್ಕೃತಿ ಬೆಳೆಯುವುದರಲ್ಲಿ ಮನುಷ್ಯನ ಕಲ್ಯಾಣ ಅಡಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆ ಸಾಧನೆ ನಮ್ಮ ನಿಮ್ಮೆಲರ ಬಾಳಿಗೆ ಬಲ ತರುತ್ತದೆ. ಉಭಯ ಮಠಗಳ ಜವಾಬ್ದಾರಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ವಹಿಸಿದ್ದಾರೆ ಎಂದು ತಿಳಿಸಿದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚನ್ನಗಿರಿ, ತೊಗರ್ಸಿ, ಹಾರನಹಳ್ಳಿ, ರಟ್ಟಿಹಳ್ಳಿ, ನಾಗವಂದ, ಹೊನ್ನಾಳಿ, ಮಳಲಿ, ಕಾರ್ಜುವಳ್ಳಿ ಮತ್ತಿತರ 25ಕ್ಕೂ ಅಧಿಕ ಶ್ರೀಗಳು ಪಾಲ್ಗೊಂಡಿದ್ದರು.ಕಲಬುರ್ಗಿಯ ಶಿವಾನಂದ ಮಂದೇವಾಲ ಪ್ರಾರ್ಥಿಸಿ, ಚನ್ನೇಶ ಶಾಸ್ತ್ರಿಗಳು ಸ್ವಾಗತಿಸಿ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮದ ನಂತರ ಸರ್ವರಿಗೂ ಅನ್ನ ದಾಸೋಹ ಜರುಗಿತು.